ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳ ರಕ್ಷಣೆಗೆ ನಿಂತ ರಾಜ್ಯ ಸರ್ಕಾರ- ನೋಡಲ್ ಅಧಿಕಾರಿ ನೇಮಕ, ಸಹಾಯವಾಣಿ ಆರಂಭ
ಬೆಂಗಳೂರು: ರಷ್ಯಾ ಘೋಷಣೆ ಮಾಡಿರುವ ಯುದ್ಧದಿಂದ ಉಕ್ರೇನ್ ತತ್ತರಿಸಿದೆ. ಇಂದು ಬೆಳಗ್ಗೆಯಿಂದ ಉಕ್ರೇನ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಬಾಂಬ್ ದಾಳಿ ನಡೆಸುತ್ತಿದೆ. ಈ ನಿಮಿತ್ತ ಅಲ್ಲಿನ ಪ್ರಜೆಗಳು ನರಳುವಂತಾಗಿದೆ. ಈಗಾಗಲೇ ಹಲವೆಡೆ ವಿದ್ಯುತ್, ನೀರು, ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದೆ. ಉಕ್ರೇನ್ ತುರ್ತು ಪರಿಸ್ಥಿತಿ ಕೂಡ ಘೋಷಣೆ ಮಾಡಿದೆ. ಯುದ್ಧ ಬೆನ್ನಲ್ಲೇ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಂತಿದೆ. ವಾಯನೆಲೆ ಸಂಪೂರ್ಣ ಬಂದ್ ಆದ ಕಾರಣ ಭಾರತೀಯರನ್ನು ವಾಪಸ್ ಕರೆತರಲು ಪರ್ಯಾಯ ಮಾರ್ಗಗಳನ್ನು ಸರ್ಕಾರ ಹುಡುಕುತ್ತಿದೆ.
ಈ ನಿಟ್ಟಿನಲ್ಲಿ ರಾಜ್ಯದ ವಿದ್ಯಾರ್ಥಿಗಳನ್ನು ರಕ್ಷಿಸಲು ಕರ್ನಾಟಕ ಸರ್ಕಾರ ನೋಡೆಲ್ ಅಧಿಕಾರಿ ಹಾಗೂ ಸಹಾಯವಾಣಿಯನ್ನು ತೆರೆದಿದೆ ಎಂದು ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ಐಎಫ್ಎಸ್ ಅಧಿಕಾರಿ, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿ ಡಾ.ಮನೋಜ್ ರಾಜನ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿದೆ. ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಹಯೋಗದಿಂದ ಉಕ್ರೇನ್‌ನಲ್ಲಿರುವ ಕನ್ನಡಿಗರನ್ನು ವಾಪಸ್ ಕರ್ನಾಟಕಕ್ಕೆ ಕರೆತರಲು ಯತ್ನಿಸಲಿದ್ದಾರೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ರಕ್ಷಣೆ ಬಯಸುವವರು, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ/ಕರ್ನಾಟಕ ಪ್ರಜೆಗಳಯ/ ವಿದ್ಯಾರ್ಥಿಗಳು ದಿನದ24X7 ಸಹಾಯವಾಣಿಯನ್ನು ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆ: 080 1070, 080 2234 0676. ಇಮೇಲ್: manoarya@gmail.com, revenuedmkar@gmail.com ಸಂಪರ್ಕಿಸಬಹುದು
ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆ ಕೂಡ ನಿಯಂತ್ರಣ ಕೇಂದ್ರ ಸ್ಥಾಪಿಸಿದ್ದು ಸಹಾಯವಾಣಿಗಳನ್ನು ಆರಂಭಿಸಿದೆ. +91 11 2301 2113, +91 11 2301 4104, +91 11 2301 7905.
ಟೋಲ್ಫ್ರೀ ಸಂಖ್ಯೆ 1800 11 8797 (ದೆಹಲಿ)
ಇಮೇಲ್: situationroom@mea.gov.in ಸಂಪರ್ಕಿಸಲು ತಿಳಿಸಿದೆ.