Samatha Murthy: 120 ಕೆಜಿ ಚಿನ್ನದ ಮೂರ್ತಿಗೆ ಬುಲೆಟ್ ಪ್ರೂಫ್ ಭದ್ರತೆ..!
ಹೈದರಾಬಾದ್: ಚಿನ್ನಜೀಯರ್ ಸ್ವಾಮಿ ನೇತೃತ್ವದಲ್ಲಿ ಸ್ಥಾಪನೆಯಾಗಿರುವ ಬೃಹತ್ ಪ್ರವಾಸಿ ತಾಣ ರಾಮಾನುಜಾಚಾರ್ಯ ಸಮತಾಮೂರ್ತಿ ಸ್ಫೂರ್ತಿ ಕೇಂದ್ರ. ಇಲ್ಲಿ 216 ಅಡಿಗಳ ರಾಮಾನುಜಾಚಾರ್ಯರ ವಿಗ್ರಹದ ಜೊತೆಗೆ, ಅಂತ್ಯ ಬೆಲೆಬಾಳುವ 120 ಕೆಜಿಗಳ ಸ್ವರ್ಣ ವಿಗ್ರಹವನ್ನು ಕೂಡಾ ಇಲ್ಲಿಗೆ ಭಕ್ತರು ದರ್ಶನ ಪಡೆಯಬಹುದು. ಸರಿಸುಮಾರು 75 ಕೋಟಿ ರೂಪಾಯಿ ಬೆಲೆಬಾಳುವ ಈ ಚಿನ್ನದ ಮೂರ್ತಿಗೆ ಈಗ ಬುಲೆಟ್ ಪ್ರೂಫ್ ಭದ್ರತೆ ಒದಗಿಸಲಾಗುತ್ತಿದೆ. ಜೊತೆಗೆ ಜೆಡ್ ಕೆಟಗಿರಿ ಮಟ್ಟದ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಜೀಯರ್ ಸ್ವಾಮಿ ಟ್ರಸ್ಟ್ ನಿರ್ವಾಹಕರು ತಿಳಿಸಿದ್ದಾರೆ.
ಸಮತಾ ಮೂರ್ತಿ ಸ್ಥಾಪನೆ ದಿನ ಲಕ್ಷಾಂತರ ಜನ ಆಗಮಿಸಿದ್ದರು. ಮುಂದಿನ ದಿನಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಲಿದ್ದಾರೆ. ಹೀಗಾಗಿ ಚಿನ್ನದ ವಿಗ್ರಹಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗುತ್ತಿದೆ. ವಿಗ್ರಹದಿಂದ ಆರರಿಂದ ಎಂಟು ಅಡಿಗಳ ದೂರದಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಫ್ರೇಮ್ ಅಳವಡಿಸಲಾಗುತ್ತಿದೆ. ಇದನ್ನು ಅಳವಡಿಸುವವರೆಗೂ ಸ್ವರ್ಣಮೂರ್ತಿಯ ದರ್ಶನಕ್ಕೆ ಅವಕಾಶ ಇಲ್ಲ ಎಂದು ಟ್ರಸ್ಟ್ ವ್ಯವಸ್ಥಾಪಕರು ತಿಳಿಸಿದ್ದಾರೆ. ಇನ್ನು ಸ್ವರ್ಣ ಮೂರ್ತಿಯ ಸುತ್ತ ಶಸ್ತ್ರಸಜ್ಜಿತ ಸಿಬ್ಬಂದಿ ದಿನದ 24 ಗಂಟೆಗೂ ಭದ್ರತೆ ಒದಗಿಸಲಿದ್ದಾರೆ.
ಸ್ವರ್ಣ ಮೂರ್ತಿ ಪೂರ್ತಿ ಬಂಗಾರದ್ದಾಗಿದೆ. ಅದರ ಒಟ್ಟು ತೂಕ 120 ಕೆಜಿ. ಇದರ ಜೊತೆಗೆ ಮೂರ್ತಿ ಅಲಂಕಾರಕ್ಕೆಂದು ಐದಾರು ಕೆಜಿ ತೂಕದ ಬಂಗಾರದ ಆಭರಣಗಳನ್ನು ಮಾಡಿಸಲಾಗಿದೆ. ಸದ್ಯದ ಮಾರುಕಟ್ಟೆ ಬೆಲೆಯಂತೆ ಲೆಕ್ಕ ಹಾಕಿದರೆ, ಸ್ವರ್ಣಮೂರ್ತಿಯ ಬೆಲೆ ಬರೋಬ್ಬರಿ 75 ಕೋಟಿ ರೂಪಾಯಿಗೂ ಹೆಚ್ಚಿರುತ್ತದೆಂದು ತಿಳಿದುಬಂದಿದೆ.