Cinema

ʻಜೇಮ್ಸ್‌ʼ ಟೀಸರ್‌ ರಿಲೀಸ್-‌ ಖಡಕ್‌ ಪೊಲೀಸ್ ಆಫೀಸರ್‌ ಆಗಿ ಅಪ್ಪು ದರ್ಶನ

‌ಬೆಂಗಳೂರು:  ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಜೇಮ್ಸ್‌(James) ಟೀಸರ್‌ ಬಿಡುಗಡೆಯಾಗಿದೆ. ಆದರೂ ಅಭಿಮಾನಿಗಳಲ್ಲಿ ಅವರಿಲ್ಲದ ನೋವು ಮಾತ್ರ ಮಾಯವಾಗಿಲ್ಲ.  ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ. ಕಳೆದ ವರ್ಷ ಅಕ್ಟೋಬರ್ 29 ರಂದು ಅವರು ಹೃದಯಾಘಾತದಿಂದ ನಿಧನರಾದ ಅಪ್ಪುಗೆ ಇಂದಿಗೂ ಅಭಿಮಾನಿಗಳು, ಕನ್ನಡಿಗರು ಹಾಗೂ ಅನೇಕ ಗಣ್ಯರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಅಪ್ಪು ನಟನೆ ಮಾಡಿದ್ದ ಕೊನೆಯ ಸಿನಿಮಾ ‘ಜೇಮ್ಸ್’ಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಗಣರಾಜ್ಯೋತ್ಸವದಂದು ‘ಜೇಮ್ಸ್’ ಚಿತ್ರತಂಡ ಪುನೀತ್‌ ರಾಜ್‌ಕುಮಾರ್ ಅವರ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಆದಷ್ಟು ಬೇಗ ಟೀಸರ್ ಕೂಡ ಬಿಡುಗಡೆ ಮಾಡುವುದಾಗಿ ಘೋಷಿಸಿದ್ರು. ಇಂದು ಬೆಳಗ್ಗೆ ಪುನೀತ್ ಕೊನೆಯ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾ ಆನಂದ್ ಮತ್ತು ವಿಲನ್ ಆಗಿ ಶ್ರೀಕಾಂತ್ ನಟಿಸಿದ್ದಾರೆ. ಚೇತನ್ ಕುಮಾರ್ ಚಿತ್ರದ ನಿರ್ದೇಶನ ಮಾಡಿದ್ದಾರೆ.

ʻಭಾವನೆಗಳು ವ್ಯಾಪಾರಕ್ಕಿಂತ ದೊಡ್ಡದುʼ ಎಂಬ ಶೀರ್ಷಿಕೆಯನ್ನು ಈ ಟೀಸರ್‌ನಲ್ಲಿ ತೋರಿಸಲಾಗಿದೆ. ಈ ಸಿನಿಮಾ ಸಂಪೂರ್ಣ ಮಾಫಿಯಾವನ್ನು ಒಳಗೊಂಡಿದೆ ಮಾಫಿಯಾ ಡಾನ್‌ಗಳೊಂದಿಗೆ ಪುನೀತ್‌ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಸೆಣಸಾಟ ನಡೆಸಿದ್ದಾರೆ. ಸಾಹಸ ದೃಶ್ಯಗಳನ್ನು ಒಳಗೊಂಡಿರುವ ಈ ಸಿನಿಮಾ ಫುಲ್ ಆ್ಯಕ್ಷನ್ ಎಂಟರ್ ಟೈನರ್ ಆಗಿರಲಿದೆಯಂತೆ. ಈ ಸಿನಿಮಾದಲ್ಲಿ ಅಪ್ಪುಗೆ ಶಿವಣ್ಣ ಕಂಠದಾನ ಮಾಡಿದ್ದಾರೆ.  ಪುನೀತ್ ಅಭಿನಯದ ಕೊನೆಯ ಸಿನಿಮಾ ಟೀಸರ್ ಬಿಡುಗಡೆಯಾದ ಕಾರಣ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಸಂತಸಗೊಂಡಿದ್ದು, ಮಾರ್ಚ್ 17ಕ್ಕೆ ‘ಜೇಮ್ಸ್’ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

Share Post