ಬೆಂಗಳೂರು ವಿವಿ ಎಬಿವಿಪಿ ಪ್ರತಿಭಟನೆ; ಸ್ಪಷ್ಟನೆ ನೀಡಿದ ಡಿಸಿಪಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಗಲಾಟೆ ಬಗ್ಗೆ ಡಿಸಿಪಿ ಸಂಜೀವ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಳಗ್ಗೆ ವಿದ್ಯಾರ್ಥಿಗಳ ಒಂದು ಗುಂಪು ಪ್ರತಿಭಟನೆ ನಡೆಸುತ್ತಿತ್ತು. ಅನಂತರ ಎಬಿವಿಪಿ ವಿದ್ಯಾರ್ಥಿಗಳೂ ಪ್ರತಿಭಟನೆ ಶುರು ಮಾಡಿದ್ದಾರೆ. ಎರಡೂ ಗುಂಪುಗಳು ಬೇರೆ ಬೇರೆ ವಿಚಾರಕ್ಕೆ ಪ್ರತಿಭಟನೆ ಮಾಡಿವೆ. ಆದರೆ ವಿವಿ ಆಡಳಿತ ಮಂಡಳಿ ಪ್ರತಿಭಟನೆ ನಡೆಸದಂತೆ ಸೂಚಿಸಿದೆ. ಆದರೂ ಪ್ರತಿಭಟನೆ ಮುಂದುವರೆಸಿದ್ದಾರೆ. ಈ ನಡುವೆ ಎರಡು ಗುಂಪುಗಳ ನಡುವೆ ಜಗಳ ಆಗಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.
ಅಧಿಕಾರಿಗಳು ಸೂಚನೆ ಕೊಟ್ಟರೂ ಒತ್ತಾಯ ಪೂರ್ವಕವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಲಾಠಿ ಪ್ರಹಾರ ನಡೆಸಲಾಯಿತು. ಈ ವೇಳೆ ಒಬ್ಬರು ಎಸಿಪಿ ಸೇರಿದಂತೆ ಪೊಲೀಸರಿಗೂ ಗಾಯಗಳಾಗಿವೆ ಎಂದು ಡಿಸಿಪಿ ಸಂಜೀವ್ ಕುಮಾರ್ ಹೇಳಿದ್ದಾರೆ. ಇನ್ನೊಂದೆಡೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೂಡಾ ಸ್ಪಷ್ಟನೆ ಕೊಟ್ಟಿದ್ದು, ವಿದ್ಯಾರ್ಥಿಗಳು ಏನೇ ಸಮಸ್ಯೆ ಇದ್ದರೂ ನೇರವಾಗಿ ಬಂದು ಕೇಳಬಹುದು. ಈ ರೀತಿಯ ಪ್ರತಿಭಟನೆ ಮಾಡಿ ಗದ್ದಲ ಎಬ್ಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.