ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಅಗತ್ಯ; ವೆಂಕಯ್ಯ ನಾಯ್ಡು
ಬೆಂಗಳೂರು: ದೇಶದಲ್ಲಿ ಪಕ್ಷಾಂತರ ದೊಡ್ಡ ಪಿಡುಗಾಗಿದೆ. ಇದು ಭಾರತ ದೇಶವನ್ನು ಸಾಕಷ್ಟು ಬಾಧಿಸುತ್ತಿದೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯತೆ ಇದೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ‘ನವ ಭಾರತದಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ಮಾತನಾಡಿದ ಅವರು, ಪಕ್ಷಾಂತರಿಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಜನಪ್ರತಿನಿಧಿಗಳ ಪಕ್ಷಾಂತರದಿಂದಾಗಿ ದೇಶದ ರಾಜಕಾರಣದಲ್ಲಿ ಮೌಲ್ಯ ಕುಸಿತವಾಗುತ್ತಿದೆ. ಅದು ಕ್ರಮೇಣ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸುತ್ತಿದೆ. ರಾಜಕಾರಣದಲ್ಲಿ ಮೌಲ್ಯ ಕುಸಿತ ತಡೆಯುವ ಮೂಲಕ ಪ್ರಜಾಪ್ರಭುತ್ವವನ್ನು ಕಾಪಾಡಬೇಕಿದೆ ಎಂದು ಹೇಳಿದರು.
ಪಕ್ಷಾಂತರ ಮಾಡುವವರು ಹುದ್ದೆಗೆ ರಾಜೀನಾಮೆ ನೀಡುವುದನ್ನು ಕಡ್ಡಾಯಗೊಳಿಸಬೇಕು. ಪುನರಾಯ್ಕೆ ಆಗುವವರೆಗೆ ಯಾವುದೇ ಹುದ್ದೆ ನೀಡಬಾರದು. ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಯ ಪ್ರಕರಣಗಳನ್ನು ಸಭಾಧ್ಯಕ್ಷರು ಮತ್ತು ನ್ಯಾಯಾಲಯಗಳು ಮೂರು ತಿಂಗಳೊಳಗೆ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಉಪ ರಾಷ್ಟ್ರಪತಿ ಹೇಳಿದರು.