ಐದು ವರ್ಷದಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ 70 ಮಂದಿ ಸಾವು; ಯಾವಾಗ ಎಚ್ಚೆತ್ತುಕೊಳ್ಳುತ್ತೆ ಇಲಾಖೆ..?
ಬೆಂಗಳೂರು; ಬೆಂಗಳೂರು ನಗರದ ವೈಟ್ಫೀಲ್ಡ್ನ ಕಾಡುಗೋಡಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಭಾನುವಾರ (ನವೆಂಬರ್ 19) ಬಾಣಂತಿ ಹಾಗೂ 9 ತಿಂಗಳ ಹಸುಗೂಸು ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಬೆಸ್ಕಾಂ ಅಧಿಕಾರಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ನಿರ್ಲಕ್ಷ್ಯದ ಆರೋಪದ ಮೇಲೆ ಬೆಸ್ಕಾಂ ಎಇ ಚೇತನ್, ಜೆಇ ರಾಜಣ್ಣ, ಸ್ಟೇಷನ್ ಆಪರೇಟರ್ ಮಂಜು ಸೇರಿದಂತೆ ಐವರನ್ನು ಕಾಡುಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದರು. ಆದ್ರೆ, ಇದೀಗ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಇನ್ನು ಬೆಸ್ಕಾಂ ಇಲಾಖೆ ಈ ಐದೂ ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇನ್ನೊಂದೆಡೆ ಇಂದು ಮೃತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಆದ್ರೆ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಯಾರೂ ಆಗಮಿಸದೇ ಇದ್ದುದಕ್ಕೆ ಕುಟಂಬಸ್ಥರು ಹಾಗೂ ಸಂಬಂಧಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಾಡುಗೋಡಿಯ ಎ.ಕೆ.ಗೋಪಾಲ ಕಾಲೋನಿಯ ನಿವಾಸಿ ಸಂತೋಷ್, ಪತ್ನಿ ಜೊತೆ ತಮ್ಮೂರು ಚೆನ್ನೈಗೆ ಹೋಗಿದ್ದರು. ನಿನ್ನೆ (ನವೆಂಬರ್ 19) ಬೆಳಗ್ಗೆ 5 ಘಂಟೆ ಸುಮಾರಿಗೆ ವಾಪಸ್ಸು ಸಿಲ್ಕ್ ಬೋರ್ಡ್ ಬಳಿ ಇಳಿದು, ಬಿಎಂಟಿಸಿ ಬಸ್ ಹತ್ತಿ ಹೋಪ್ ಫಾರಂ ಸಿಗ್ನಲ್ವರೆಗೂ ಬಂದಿದ್ರು. ಮಹಿಳೆ ಸೌಂದರ್ಯ 9 ತಿಂಗಳ ಮಗುವನ್ನ ಎತ್ತಿಕೊಂಡು ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಪತಿ ಸಂತೋಷ್ ಫುಟ್ಪಾತ್ ಕೆಳಗೆ ಬರುತ್ತಿದ್ದರು. ಆದ್ರೆ, ಫುಟ್ಪಾತ್ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಬೆಳಗಿನ ಜಾವ ಮಬ್ಬುಕತ್ತಲಲ್ಲಿ ವಿದ್ಯುತ್ ತಂತಿ ಕಾಣದೆ ಅದರ ಮೇಲೆ ಸೌಂದರ್ಯ ಕಾಲಿಟ್ಟಿದ್ದರು. ಅಷ್ಟೇ, ಸೌಂದರ್ಯ ಮಗು ಜೊತೆಗೆ ಅಲ್ಲೇ ಕುಸಿದು ಬಿದ್ದಿದ್ರು. ಪಕ್ಕದಲ್ಲೇ ಬರುತ್ತಿದ್ದ ಪತಿ ಸಂತೋಷ್ಗೂ ಶಾಕ್ ಹೊಡೆದಿತ್ತು.
ದುರಂತ ನಡೆದು ಒಂದು ತಾಸೂ ಕಳೆದರೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಬಂದಿಲ್ಲ. ಹೀಗಾಗಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಸ್ಫೋಟಗೊಂಡಿತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು. ಮೃತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಿಡಿಕಾರಿದ್ದರು.
ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ಸಾವನ್ನಪ್ಪಿದ್ದ ತಂದೆ, ಮಗಳು..!
ಕಳೆದ ವರ್ಷ ಟ್ರಾನ್ಸ್ ಫಾರ್ಮರ್ ಸ್ಫೋಟಕ್ಕೆ ಬೆಂಗಳೂರಿನಲ್ಲಿ ಯುವತಿ ಹಾಗೂ ಆಕೆಯ ತಂದೆ ಧಗಧಗಿಸಿ ಹೊತ್ತಿ ಉರಿದಿದ್ದರು. ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ಸ್ಕೂಟರ್ನಲ್ಲಿ ಹೋಗುತ್ತಿದ್ದವರಿಗೆ ಬೆಂಕಿ ತಾಗಿತ್ತು. ಪರಿಣಾಮವಾಗಿ ತಂದೆ ಸ್ಥಳದಲ್ಲೇ ಮೃತಪಟ್ಟರೆ, ಅವರ ಮಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಬೆಂಗಳೂರಿನ ಉಲ್ಲಾಳ ಬಳಿಯ ಮಂಗನಹಳ್ಳಿ ಗ್ರಾಸ್ ಬಳಿ 2022ರ ಮಾರ್ಚ್ 24 ರಂದು ಈ ದುರಂತ ನಡೆದಿತ್ತು. ರಸ್ತೆಯಲ್ಲೇ ತಂದೆ, ಮಗಳಿಬ್ಬರೂ ಹೊತ್ತಿ ಉರಿದಿದ್ದರು.
ಮಂಗನಹಳ್ಳಿ ನಿವಾಸಿ ಶಿವರಾಜ್ (55), ಪುತ್ರಿ ಚೈತನ್ಯ (19) ಸಾವನ್ನಪ್ಪಿದ್ದರು. ನಿಶ್ಚಿತಾರ್ಥಕ್ಕೆ ಕಲ್ಯಾಣ ಮಂಟಪ ಬುಕ್ ಮಾಡಿ ಮಗಳ ಜತೆ ಶಿವರಾಜ್ ಮನೆಗೆ ಮರಳುವಾಗ ಈ ಘಟನೆ ನಡೆದಿತ್ತು.
ಐದು ವರ್ಷದಲ್ಲಿ 70 ಮಂದಿ ಬಲಿ!
ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕಳೆದ ಐದು ವರ್ಷಗಳಲ್ಲಿ 70 ಮಂದಿ ಸಾವನ್ನಪ್ಪಿದ್ದಾರೆ. 2018-19ರಲ್ಲಿ ವಿದ್ಯುತ್ ತಗುಲಿ 11 ಮಂದಿ ಸಾವನ್ನಪ್ಪಿದ್ದಾರೆ. 2019-20ರಲ್ಲಿ 10 ಮಂದಿ, 2020-21ರಲ್ಲಿ 9 ಮಂದಿ, 2021-22ರಲ್ಲಿ 13 ಮಂದಿ, 2022-23ರಲ್ಲಿ 19 ಮಂದಿ ಹಾಗೂ 2023-24ರಲ್ಲಿ 8 ಮಂದಿ ವಿದ್ಯುತ್ ಅವಘಡಗಳಲ್ಲಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಬೆಸ್ಕಾಂ ನಿರ್ಲಕ್ಷ್ಯದಿಂದ ಆದ ಅವಘಡಗಳಿಂದ ಸಾವನ್ನಪ್ಪಿದವರು. ಕಳೆದ ಐದು ವರ್ಷದಲ್ಲಿ ಒಟ್ಟು 81 ಮಂದಿಗೆ ವಿದ್ಯುತ್ ತಂತಿ ತಗುಲಿದ್ದು, ಇದರಲ್ಲಿ 70 ಮಂದಿ ಸಾವನ್ನಪ್ಪಿದ್ದಾರೆ. ಉಳಿದ 11 ಮಂದಿ ಬದುಕುಳಿದಿದ್ದಾರೆ.