ಬುಲ್ಲಿ ಬಾಯ್ ಪ್ರಕರಣದ ಪ್ರಮುಖ ಆರೋಪಿ ಅಸ್ಸಾಂನಲ್ಲಿ ಅರೆಸ್ಟ್
ನವದೆಹಲಿ: ʻಬುಲ್ಲಿ ಬಾಯ್ʼ ಮೊಬೈಲ್ ಅಪ್ಲಿಕೇಷನ್ ಪ್ರಕರಣ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನೀರಜ್ ಬಿಷ್ಣಾಯ್ ಎಂದು ಗುರುತಿಸಲಾಗಿದೆ. ಈತ ಅಸ್ಸಾಂ ಮೂದವನಾಗಿದ್ದು, ಅಸ್ಸಾಂನಲ್ಲಿಯೇ ಆರೋಪಿಗಳನ್ನು ಬಂಧಿಸಲಾಗಿದ್ದು, ದೆಹಲಿಗೆ ಕರೆತರಲಾಗುತ್ತಿದೆ.
ನೀರಜ್ ಬಿಷ್ಣಾಯ್ ʻಬುಲ್ಲಿ ಬಾಯ್ʼ ಅಪ್ಲಿಕೇಷನ್ ಸಿದ್ಧಪಡಿಸಿದ ಪ್ರಮುಖ ಆರೋಪಿ. ಈತನೇ ಗಿಟ್‌ಹಬ್‌ನಲ್ಲಿ ಮೊಬೈಲ್ ಅಪ್ಲಿಕೇಷನ್ ಹಾಕಿದ್ದ. ಜೊತೆಗೆ ಈ ಅಪ್ಲಿಕೇಷನ್ ಗೆ ಸಂಬಂಧಿಸಿದ ಪ್ರಮುಖ ಟ್ವಿಟರ್ ಅಕೌಂಟ್‌ನ್ನು ಕೂಡಾ ಈತನೇ ಹ್ಯಾಂಡಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಎರಡು ದಿನದ ಹಿಂದೆ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಅನಂತರ ಯುವತಿಯೊಬ್ಬಳನ್ನು ಈ ಸಂಬಂಧ ಬಂಧಿಸಲಾಯಿತು. ಇದೀಗ ಪ್ರಮುಖ ಆರೋಪಿ ನೀರಜ್ ಬಿಷ್ಣಾಯ್ ಕೂಡಾ ಸಿಕ್ಕಿಬಿದ್ದಿದ್ದಾನೆ.
ಬುಲ್ಲಿ ಬಾಯ್ ಅಪ್ಲಿಕೇಷನ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ತಿರುಚಿ ಅಪ್‌ಲೋಡ್ ಮಾಡಲಾಗಿತ್ತು. ನೂರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರನ್ನು ಹರಾಜಿಗಿಡಲಾಗಿತ್ತು. ಈ ಸಂಬಂಧ ಪತ್ರಕರ್ತೆಯೊಬ್ಬರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದಾದ ನಂತರ ಮುಂಬೈ, ದೆಹಲಿ, ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದರು.