Politics

ರಾಹುಲ್ ಗಾಂಧಿ ಹೆಸರು ಹೇಳದೆ ಮತ ಕೇಳುತ್ತಿರುವ ಕಾಂಗ್ರೆಸ್; ಆರ್.ಅಶೋಕ್

ಕೋಲಾರ; ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಹೆಸರು ಹೇಳದೆ ಸಿಎಂ ಸಿದ್ದರಾಮಯ್ಯ ಹಾಗೂ ಗ್ಯಾರಂಟಿ ಹೆಸರಲ್ಲಿ ಮತ ಯಾಚಿಸುತ್ತಿದ್ದಾರೆ. ಆದರೆ ರಾಷ್ಟ್ರಮಟ್ಟದ ಚುನಾವಣೆಯಲ್ಲಿ ಇದು ಪ್ರಯೋಜನಕ್ಕೆ ಬರುವುದಿಲ್ಲವೆಂದು ಮತದಾರರು ಅರಿತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಹುಲ್‌ ಗಾಂಧಿಯ ವಿಷಯಗಳನ್ನು ತರದೆ ಗ್ಯಾರಂಟಿ ಹೆಸರಲ್ಲಿ ಮಾತ್ರ ಮತ ಕೇಳುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ಗೆ ನಾಯಕತ್ವ ಇಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ನಾವು ನರೇಂದ್ರ ಮೋದಿ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ನೇರವಾಗಿ ಹೇಳಿದ್ದೇವೆ. ಮನಮೋಹನ್‌ ಸಿಂಗ್‌ ಸರ್ಕಾರ ಏನು ಮಾಡಿದೆ ಎಂಬುದನ್ನಾದರೂ ಸಿಎಂ ಸಿದ್ದರಾಮಯ್ಯ ಮೊದಲಾದ ನಾಯಕರು ಹೇಳಬೇಕಿತ್ತು. ಆದರೆ ಈ ಬಗ್ಗೆ ಎಲ್ಲೂ ಮಾತಾಡುತ್ತಿಲ್ಲ. ಇದು ದೇಶದ ಭವಿಷ್ಯ ನಿರ್ಮಿಸುವ ಚುನಾವಣೆಯಾಗಿದ್ದು, ಇಂತಹ ಸಂದರ್ಭದಲ್ಲಿ ದೇಶದ ಅಭಿವೃದ್ಧಿಗೆ ಮತ ನೀಡಬೇಕು ಎಂದರು.

ಕಾಂಗ್ರೆಸ್‌ಗೆ ಮತ ಹಾಕಿದರೆ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದಂತಾಗುತ್ತದೆ. ಹಿಂದಿನ ಯುಪಿಎ ಸರ್ಕಾರ ಹಗರಣಗಳ ಸರಮಾಲೆಯನ್ನೇ ಸೃಷ್ಟಿಸಿತ್ತು. ಲಾಲೂ ಪ್ರಸಾದ್‌ ಯಾದವ್‌, ಅರವಿಂದ ಕೇಜ್ರಿವಾಲ್‌, ಸೋನಿಯಾ ಗಾಂಧಿ ಎಲ್ಲರೂ ಜೈಲಲ್ಲಿದ್ದಾರೆ ಅಥವಾ ಜಾಮೀನಿನ ಮೇಲಿದ್ದಾರೆ. ಕಾಂಗ್ರೆಸ್‌ಗೆ ಮತ ನೀಡಿದರೆ ದೇಶದ ಅಭದ್ರತೆಗೆ ಬೆಂಬಲ ನೀಡಿದಂತಾಗುತ್ತದೆ. ಮೋದಿ ಬಂದ ನಂತರ ಜಮ್ಮು-ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆತು ಪಾಕಿಸ್ತಾನದ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ವಿಧಾನಸೌಧದಲ್ಲೇ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದನ್ನು ನೋಡಿದ್ದೇವೆ. ಆದ್ದರಿಂದ ಕಾಂಗ್ರೆಸ್‌ಗೆ ಮತ ನೀಡಿದರೆ ದೇಶಕ್ಕೆ ಸುರಕ್ಷತೆ ಸಿಗುವುದಿಲ್ಲ ಎಂದರು.

ಮನೆಯೊಂದು ಎರಡು ಬಾಗಿಲು

ಕೋಲಾರದಲ್ಲಿ ಕಾಂಗ್ರೆಸ್‌ನ ಸ್ಥಿತಿ ಮನೆಯೊಂದು ಎರಡು ಬಾಗಿಲಾಗಿದೆ. ರಮೇಶ್‌ ಕುಮಾರ್‌ ಮತ್ತು ಕೆ.ಎಚ್‌.ಮುನಿಯಪ್ಪ ಗ್ಯಾಂಗ್‌ ಇಲ್ಲಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯನವರ ಗ್ಯಾಂಗ್‌ ಕೂಡ ಇದೆ. ಈಗ ಕಾಂಗ್ರೆಸ್‌ ನಿಲ್ಲಿಸಿರುವ ಅಭ್ಯರ್ಥಿ ಹೊಸ ಗ್ಯಾಂಗ್‌ಗೆ ಸೇರಿದ್ದಾರೆ. ಮೂರು ತಲೆಮಾರುಗಾಗುವಷ್ಟು ಲೂಟಿ ಮಾಡಿದ್ದೇವೆ ಎಂದು ರಮೇಶ್‌ಕುಮಾರ್‌ ಈ ಹಿಂದೆಯೇ ಹೇಳಿದ್ದಾರೆ ಎಂದರು.

ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಎತ್ತಿನಹೊಳೆ ಯೋಜನೆಗೆ ಚಾಲನೆ ದೊರೆತಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಈ ಯೋಜನೆಗೆ 3,000 ಕೋಟಿ ರೂ. ನೀಡಿದ್ದರು. ಕಾಂಗ್ರೆಸ್‌ ಬಂದ ನಂತರ ಕೋಲಾರದಿಂದ ಆರಂಭವಾಗಿ ಎಲ್ಲ ಕಡೆ ಬರಗಾಲವಿದೆ. ಯಾರಿಗೂ ನೀರಿಲ್ಲ, ಒಂದೇ ಒಂದು ಗೋಶಾಲೆಯನ್ನೂ ಮಾಡಿಲ್ಲ. ಸರ್ಕಾರ ಜನರ ಸಂಕಷ್ಟಕ್ಕೆ ಗಮನ ನೀಡಿಲ್ಲ. ಸಿಎಂ ಸಿದ್ದರಾಮಯ್ಯನವರು ಮಜವಾದಿಯಾಗಿ ಸುತ್ತುತ್ತಿದ್ದಾರೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ 33% ಮೀಸಲನ್ನು ಮಹಿಳೆಯರಿಗೆ ನೀಡಿದ್ದಾರೆ. ಉಜ್ವಲ ಯೋಜನೆಯಡಿ 10 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ ನೀಡಿದ್ದಾರೆ. 14 ಕೋಟಿ ಮನೆಗಳಿಗೆ ಕೊಳಾಯಿ ನೀರು ಕಲ್ಪಿಸಿದ್ದಾರೆ. ಕೋಲಾರಕ್ಕೆ ಜಲಜೀವನ್‌ ಮಿಷನ್‌ನಡಿ 1,880 ಕೋಟಿ ರೂ. ನೀಡಲಾಗಿದೆ. ಕಿಸಾನ್‌ ಸಮ್ಮಾನ್‌ನಡಿ ದೇಶದಲ್ಲಿ 11.88 ಕೋಟಿ ರೈತರಿಗೆ ಹಣ ನೀಡಲಾಗಿದೆ. 25 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. ಕರ್ನಾಟಕದಲ್ಲಿ 4608 ಕಿ.ಮೀ. ಹೆದ್ದಾರಿ ನಿರ್ಮಾಣವಾಗಿದ್ದು, 1.16 ಲಕ್ಷ ಕೋಟಿ ರೂ. ನೀಡಲಾಗಿದೆ. ಕೋಲಾರಕ್ಕೆ ಹೆದ್ದಾರಿ ನಿರ್ಮಾಣಕ್ಕೆ 15,000 ಕೋಟಿ ರೂ. ನೀಡಲಾಗಿದೆ. ಆದರೆ ಹಿಂದಿನ ಯುಪಿಎ ಸರ್ಕಾರ ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಸಿಎಂ ಸಿದ್ದರಾಮಯ್ಯನವರ ಹೆಸರಿನಲ್ಲಿ ಕಾಂಗ್ರೆಸ್‌ ಮತ ಕೇಳುತ್ತಿದೆ. ಆದರೆ ಅವರ ಕೊಡುಗೆ ದೇಶಕ್ಕೆ ಏನೂ ಇಲ್ಲ ಎಂದರು.

ಗ್ಯಾರಂಟಿ ಬಂದ ನಂತರ ಒಂದು ಕಿ.ಮೀ. ರಸ್ತೆ ನಿರ್ಮಾಣವಾಗಿಲ್ಲ. ಬರಗಾಲದ ಪರಿಹಾರಕ್ಕೆ ಹಣ ಬಿಡುಗಡೆಗೊಳಿಸಿಲ್ಲ. ಗ್ಯಾರಂಟಿಗಾಗಿ ವಿದ್ಯುತ್‌, ಹಾಲು, ನೀರು, ಎಲ್ಲ ದರಗಳನ್ನು ಏರಿಸಿದ್ದಾರೆ. ರೈತರು ಸಾಲ ತೆಗೆದುಕೊಳ್ಳಲು ಬಳಸುವ ಸ್ಟಾಂಪ್‌ ಡ್ಯೂಟಿ ಜಾಸ್ತಿ ಮಾಡಿದ್ದಾರೆ. ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಇನ್ನಷ್ಟು ಸಾಲ ಮಾಡುವ ಪರಿಸ್ಥಿತಿಗೆ ಜನರನ್ನು ದೂಡಲಿದ್ದಾರೆ. ನರೇಂದ್ರ ಮೋದಿ ಆರ್ಥಿಕ ಶಕ್ತಿಗಳಲ್ಲಿ ಭಾರತವನ್ನು ಐದನೇ ಸ್ಥಾನಕ್ಕೆ ತಂದಿದ್ದು, ಇನ್ನು ಮೂರನೇ ಸ್ಥಾನಕ್ಕೆ ತರಲಿದ್ದಾರೆ ಎಂದರು.

ಸಂಸತ್ತಿನಲ್ಲಿ ಕೇಳಲಿ

ಸಚಿವ ಕೃಷ್ಣ ಬೈರೇಗೌಡರು ಪ್ರಶ್ನೆ ಮಾಡುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್‌ ಸಂಸದರು, ರಾಜ್ಯಸಭಾ ಸದಸ್ಯರು ಸಂಸತ್ತಿನಲ್ಲಿ ತೆರಿಗೆ ಹಂಚಿಕೆ ಬಗ್ಗೆ ಪ್ರಶ್ನೆ ಮಾಡಿಲ್ಲ. ಸಂಸತ್ತಿನಲ್ಲಿ ಸವಾಲು ಹಾಕದೆ ರಾಜ್ಯದಲ್ಲಿ ಸವಾಲು ಹಾಕುವವರಿಗೆ ತಾಕತ್ತಿಲ್ಲ. ಮೋದಿ ಸರ್ಕಾರ 245% ಹೆಚ್ಚು ಅನುದಾನ ನೀಡಿದೆ ಎಂದು ಈಗಾಗಲೇ ತಿಳಿಸಿದ್ದೇವೆ. ಯುಪಿಎ ನೀಡಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಅನುದಾನವನ್ನು ರಾಜ್ಯಕ್ಕೆ ಮೋದಿ ಸರ್ಕಾರ ನೀಡಿದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಬುದ್ಧಿ ಭ್ರಮಣೆಯಾಗಿದೆ. ಸರ್ಕಾರ ಬೀಳಿಸುವಾಗ 14 ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರನ್ನು ಕಳುಹಿಸಿದ್ದೇ ಸಿದ್ದರಾಮಯ್ಯ. ಮಂಡ್ಯದಲ್ಲಿ ಕುಮಾರಸ್ವಾಮಿ ಮಗನನ್ನು ಸೋಲಿಸಿದ್ದು ನಾನೇ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದರು.

ಆದಿಚುಂಚನಗಿರಿ ಮಠ ಎಲ್ಲ ಸಮುದಾಯಗಳನ್ನು ಪ್ರೀತಿಸುತ್ತದೆ. ಡಿ.ಕೆ.ಶಿವಕುಮಾರ್ ಭಯೋತ್ಪಾದಕರನ್ನು ಬ್ರದರ್ ಎಂದ ಬಳಿಕ ಅವರು ಒಕ್ಕಲಿಗ ನಾಯಕರಾಗಲು ಸಾಧ್ಯವಿಲ್ಲ. ಜಾತಿ ಗಣತಿ ಹೆಸರಲ್ಲಿ ಕಾಂಗ್ರೆಸ್ ಒಕ್ಕಲಿಗ ಸಮುದಾಯಕ್ಕೆ ಯಾವ ಅನ್ಯಾಯ ಮಾಡಿದೆ ಎಂಬುದು ತಿಳಿದಿದೆ. ಇವರು ಒಕ್ಕಲಿಗರ ಮತ ಹೇಗೆ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ಸಂಸದ ಮುನಿಸ್ವಾಮಿ, ಮುಖಂಡರು ಉಪಸ್ಥಿತರಿದ್ದರು.

Share Post