BengaluruPolitics

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಿದರೆ ಚುನಾವಣೆಗೆ ಅನುಕೂಲ; ಗೃಹ ಸಚಿವ ಜಿ.ಪರಮೇಶ್ವರ್‌

ಬೆಂಗಳೂರು; ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಮಾಡಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಹಲವು ಸಚಿವರು ರಣದೀಪ್‌ ಸುರ್ಜೇವಾಲಾ ಅವರಿಗೆ ಮನವಿ ಮಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸಚಿವರು ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಆದ್ರೆ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಿದ್ದಾರೆ.

ಸುರ್ಜೇವಾಲಾ ಅವರು ಸಚಿವರನ್ನು ಕರೆದು ಮಾತನಾಡಿದ್ದಾರೆ. ಈ ವೇಳೆ ಹಲವು ಸಚಿವರು ಹೆಚ್ಚುವರಿ ಡಿಸಿಎಂಗಳ ಸೃಷ್ಟಿಗಾಗಿ ಮನವಿ ಮಾಡಿದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಮಾಡುವುದರಿಂದ ಎಲ್ಲಾ ಸಮುದಾಯಗಳಿಗೂ ಅಧಿಕಾರ ಕೊಟ್ಟಂತಾಗುತ್ತದೆ. ಇದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಸುರ್ಜೇವಾಲಾ ಅವರಿಗೆ ಸಚಿವರು ಮನವರಿಕೆ ಮಾಡಿಕೊಟ್ಟಿದ್ದಾರೆ.

ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿಯೇ ಸಭೆ ಕರೆದಿರಲಿಲ್ಲ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಲು ಕರೆದಿದ್ದರು. ಈ ವೇಳೆ ಹಿರಿಯ ಸಚಿವರು ಈ ಮನವಿ ಮಾಡಿದ್ದಾರೆ. ಆದ್ರೆ ಸಲಹೆ ತೆಗೆದುಕೊಳ್ಳೋದು ಬಿಡೋದು ಹೈಕಮಾಂಡ್ ಬಿಟ್ಟ ವಿಚಾರ. ಹೈಕಮಾಂಡ್ ಸಾಧಕ-ಬಾಧಕ ನೋಡಿ ಡಿಸಿಎಂ ಬಗ್ಗೆ ತೀರ್ಮಾನ ಮಾಡ್ತಾರೆ ಅಂತ ಪರಮೇಶ್ವರ್‌ ಹೇಳಿದ್ದಾರೆ.

 

Share Post