ಕರವೇ ನಾರಾಯಣಗೌಡ ಸೇರಿ 29 ಮಂದಿಗೆ ನ್ಯಾಯಾಂಗ ಬಂಧನ
ಬೆಂಗಳೂರು; ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹಾಗೂ ಇತರ 29 ಕಾರ್ಯಕರ್ತರನ್ನು ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೇವನಹಳ್ಳಿ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.
ದೇವನಹಳ್ಳಿಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರವೇ ಅಧ್ಯಕ್ಷ ನಾರಾಯಣ ಗೌಡ ಹಾಗೂ ಕಾರ್ಯಕರ್ತರನ್ನು ಬಿಗಿ ಭದ್ರತೆಯೊಂದಿಗೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕನ್ನಡ ಬೋರ್ಡ್ ಕಡ್ಡಾಯಕ್ಕೆ ಆಗ್ರಹಿಸಿ ನಿನ್ನೆ ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದ್ದರು. ತಡೆಯಲು ಬಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಕರವೇ ಅಧ್ಯಕ್ಷರನ್ನು ಪೊಲೀಸರ ನಿನ್ನೆ ಮಧ್ಯಾಹ್ನ ವಶಕ್ಕೆ ಪಡೆದುಕೊಂಡು ಪೊಲೀಸ್ ವಾಹನ ತರಬೇತಿ ಶಾಲೆಯಲ್ಲಿ ಇರಿಸಿದ್ದರು. ಬಳಿಕ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್ಗೆ ಎಂದು ಕರೆತರುವಾಗ ಮಾರ್ಗ ಮಧ್ಯೆ ಕರವೇ ಕಾರ್ಯಕರ್ತರು ದೊಡ್ಡ ಹೈಡ್ರಾಮಾವನ್ನೇ ಮಾಡಿದರು.