BengaluruPolitics

ಅಸಮಾಧಾನಿತರ ಮನವೊಲಿಸುತ್ತಿರುವ ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು;  ಲೋಕಸಭಾ ಚುನಾವಣೆಗಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಈ ಬೆನ್ನಲ್ಲೇ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕೋಮುವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕೆ ಹಲವು ಅಲ್ಪಸಂಖ್ಯಾತ ನಾಯಕರು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಹಲವು ಮಾಜಿ ಶಾಸಕರು, ಹಾಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷಾಂತರ ಮಾಡುವ ಮನಸ್ಸು ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಅಸಮಾಧಾನಿತರನ್ನು ಕರೆಸಿ ಮನವೊಲಿಸುವ, ಅಸಮಾಧಾನ ತಣಿಸುವ ಪ್ರಯತ್ನ ನಡೆಯುತ್ತಿದೆ.

ಜೆಡಿಎಸ್‌ ಮುಖಂಡ ನಿಖಿಲ್‌ ಕುಮಾರಸ್ವಾಮಿಯವರು ಅಸಮಾಧಾನಿತ ಯುವ ಮುಖಂಡರನ್ನು ಕರೆದು ಮಾತನಾಡುತ್ತಿದ್ದಾರೆ. ಶಾಸಕ ಶರಣಗೌಡ ಕಂದಕೂರು ಅವರು ಕೂಡಾ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಅವರು ಕಾಂಗ್ರೆಸ್‌ ಸೇರುವ ಆಲೋಚನೆ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬೆನ್ನಲ್ಲೇ ನಿಖಿಲ್‌ ಕುಮಾರಸ್ವಾಮಿಯವರು ಅವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ.

ಕಳೆದ ಚುನಾವಣೆಯಲ್ಲಿ ನಾವೆಲ್ಲಾ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದೆವು. ನಮ್ಮ ಕಾರ್ಯಕರ್ತರ ವಿರುದ್ಧ ಅವರು ಕೇಸ್‌ಗಳನ್ನು ಕೂಡಾ ಹಾಕಿದ್ದಾರೆ. ಹೀಗಿರುವಾಗಲೇ ಅವರ ಜೊತೆ ಮೈತ್ರಿ ಮಾಡಿಕೊಂಡರೆ ಕಾರ್ಯಕರ್ತರ ಕಥೆ ಏನು ಎಂದು ಶಾಸಕ ಶರಣಗೌಡ ಕಂದಕೂರು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಆದ್ರೆ ಇದಕ್ಕೆ ನಿಖಿಲ್‌ ಗೌಡ ಅವರು ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ. ಪಕ್ಷದ ಅಸ್ತಿತ್ವಕ್ಕಾಗಿ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಕಾಂಗ್ರೆಸ್‌ ಸೋಲಿಸಬೇಕಾದರೆ ಮೈತ್ರಿ ಅನಿವಾರ್ಯ. ಆದ್ರೆ ನಮ್ಮ ಸಿದ್ಧಾಂತದಲ್ಲಿ ಯಾವುದೇ ರಾಜೀ ಇಲ್ಲ ಎಂದು ನಿಖಿಲ್‌ ಅವರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

 

Share Post