ಟೊಮ್ಯಾಟೋ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ, ಇಲ್ಲವೇ..?
ಬೆಂಗಳೂರು; ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಆದರೂ ಅಡುಗೆಯಲ್ಲಿ ಟೊಮ್ಯಾಟೋ ಇರಲೇಬೇಕು. ಹೀಗಾಗಿ ವಿಧಿಯಿಲ್ಲದೇ ಎಲ್ಲರೂ ಕೊಂಡುಕೊಳ್ಳುತ್ತಾರೆ. ಅಂದಹಾಗೆ ಟೊಮ್ಯಾಟೋವನ್ನು ನಾವು ಇಷ್ಟು ಅವಲಂಬಿಸಿದ್ದೇವಲ್ಲ, ಅದು ನಮಗೆ ಅಷ್ಟು ಉಪಕಾರಿಯೇ..? ಟೊಮ್ಯಾಟೋ ತಿನ್ನೋದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ..? ಈ ಪ್ರಶ್ನೆಗಳಿಗೆ ಉತ್ತರ ಹುಡುಕೋಣ ಬನ್ನಿ.
ಟೊಮ್ಯಾಟೋವನ್ನು ತರಕಾರಿಯಾಗಿ ಎಲ್ಲರೂ ಬಳಸುತ್ತಾರೆ. ಅದು ಹಣ್ಣಿಗೆ ಜಾತಿಗೂ ಸೇರಿದೆ ಅಂತ ತಜ್ಞರು ಹೇಳುತ್ತಾರೆ. ಹೀಗಾಗಿ ಅಡುಗೆ ಮನೆಯಲ್ಲಿ ಟೊಮ್ಯಾಟೋಗೆ ವಿಶೇಷ ಪ್ರಾಮುಖ್ಯತೆ ಇದೆ. ಹುಣಸೆಹಣ್ಣ ಜಾಗವನ್ನು ಟೊಮ್ಯಾಟೋ ಆಕ್ರಮಿಸಿಕೊಂಡಿದೆ. ಇನ್ನು ಸಾಸ್, ಜಾಮ್ ಮುಂತದಾವುಗಳನ್ನು ನಾವು ಹೆಚ್ಚು ಉಪಯೋಗಿಸುತ್ತೇವೆ. ಅದನ್ನು ಟೊಮ್ಯಾಟೋದಿಂದಲೇ ತಯಾರು ಮಾಡೋದು.
ಯಾವುದೇ ತರಕಾರಿಗಳ ಜೊತೆ ಸೇರಿಸಿ ಟೊಮ್ಯಾಟೋ ಬೇಯಿಸಬಹುದು. ಪ್ರತಿ ಅಡುಗೆಯಲ್ಲೂ ಟೊಮ್ಯಾಟೋ ಬಳಸಬಹುದು. ಅಂದಹಾಗೆ ಟೊಮ್ಯಾಟೋದಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು. ಟೊಮ್ಯಾಟೋ ಹಣ್ಣಾದ ಮೇಲೆ ಅಂದರೆ ಕೆಂಪುಬಣ್ಣಕ್ಕೆ ಬಂದ ಮೇಲೆ ಉಪಯೋಗ ಮಾಡುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಹಸಿ ಟೊಮ್ಯಾಟೋಗಳನ್ನು ಚಟ್ನಿ ಮಾಡಲು, ಉಪ್ಪಿನಕಾಯಿ ತಯಾರಿಸಲು ಬಳಸುತ್ತಿದ್ದಾರೆ. ಅಂದಹಾಗೆ ಟೊಮ್ಯಾಟೋವನ್ನು ಅಡುಗೆಯಲ್ಲಿ ಬಳಸುವುದರಿಂದ ಉಪಯೋಗ ಏನು..? ನಷ್ಟ ಏನು ನೋಡೋಣ.
ನಾವು ಟೊಮ್ಯಾಟೋವನ್ನು ತರಕಾರಿಯಾಗಿ ಮಾತ್ರ ಉಪಯೋಗಿಸುತ್ತಿದ್ದೇವೆ. ಆದ್ರೆ ಸಸ್ಯಶಾಸ್ತ್ರೀಯವಾಗಿ ಇದು ಒಂದು ಹಣ್ಣು. ಟೊಮ್ಯಾಟೋಗಳು ಪ್ರಮುಖವಾಗಿ ಕೆಂಪು ಬಣ್ಣದಿಂದ ಕೂಡಿರುತ್ತದೆ. ಕೆಲವೆಡೆ ಎಲ್ಲೋ ಟೊಮ್ಯಾಟೋ ಹಣ್ಣುಗಳು, ಕಪ್ಪು ಬಣ್ಣದ ಟೊಮ್ಯಾಟೋ ಹಣ್ಣಗಳನ್ನೂ ನೋಡಬಹುದು.
ಭೂಮಿಯ ಮೇಲೆ ಸುಮಾರು ಹತ್ತು ಸಾವಿರದಷ್ಟು ಟೊಮ್ಯಾಟೋ ತಳಿಗಳಿವೆ. ಜೊತೆಗೆ ಬಣ್ಣ, ಗಾತ್ರದಲ್ಲಿ ವ್ಯತ್ಯಾಸಗಳೂ ಇವೆ. ಆದ್ರೆ ಜನ ಹೆಚ್ಚು ಬಳಸೋದು ಕೆಂಪು ಬಣ್ಣದ ಟೊಮ್ಯಾಟೋವನ್ನು.
ಪೌಷ್ಟಿಕಾಂಶದ ದೃಷ್ಟಿಯಿಂದ ದೇಹಕ್ಕೆ ಉತ್ತಮ ಆಹಾರವಾಗಿ ಟೊಮ್ಯಾಟೋ ಕಾರ್ಯನಿರ್ವಹಿಸುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. 80 ಗ್ರಾಂ ಟೊಮ್ಯಾಟೊ ವ್ಯಕ್ತಿಯ ದೈನಂದಿನ ಅಗತ್ಯ ಪೊಟ್ಯಾಸಿಯಮ್‌ನ 5 ಪ್ರತಿಶತವನ್ನು ಹೊಂದಿರುತ್ತದೆ. ಪೊಟ್ಯಾಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಪರಿಧಮನಿಯ ಹೃದಯ ಕಾಯಿಲೆಗಳು (ಹೃದಯಕ್ಕೆ ರಕ್ತ ಪೂರೈಕೆ ಕಡಿಮೆಯಾಗುವುದು) ಕಡಿಮೆ ಸಾಮಾನ್ಯವಾಗಿದೆ.
ಟೊಮೆಟೊದಲ್ಲಿ ಲೈಕೋಪೀನ್ ಎಂಬ ಸಂಯುಕ್ತವೂ ಇದೆ. ಇದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಪರಿಣಾಮಗಳನ್ನು ಹೊಂದಿದೆ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.