ಮೈಸೂರು ಮುಕ್ತ ವಿವಿಯಿಂದ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್
ಬೆಂಗಳೂರು; ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಲಾಗಿದೆ. ದ್ರೌಪದಿ ಮುರ್ಮು ಹಾಗೂ ಶಿಕ್ಷಣ ತಜ್ಞರಾದ ಎನ್.ರಾಮಚಂದ್ರಯ್ಯ ಹಾಗೂ ವೆಂಕಟ ಲಕ್ಷ್ಮೀನರಸಿಂಹರಾಜು ಅವರಿಗೆ ಗೌರ ಡಾಕ್ಟರೇಟ್ ನೀಡಲಾಗುವುದು ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ಹಲಸೆ ತಿಳಿಸಿದ್ದಾರೆ.
ಜುಲೈ 2ರಂದು ಘಟಿಕೋತ್ಸವ ನಡೆಯಲಿದೆ. ಇದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಈಗಾಗಲೇ ಅವರಿಗೆ ಆಹ್ವಾನ ನೀಡಿದ್ದೇವೆ. ಕಾರ್ಯ ನಿಮಿತ್ತ ಅವರು ಅಂದು ಬರಲಾಗದಿದ್ದರೆ, ಜುಲೈ 3ರಂದು ಪ್ರದಾನ ಮಾಡಲಾಗುತ್ತದೆ. ರಾಷ್ಟ್ರಪತಿಯವರು ಜುಲೈ 3ರಂದು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಅಂದು ರಾಜಭವನದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತೇವೆ ಎಂದು ಕುಲಪತಿ ತಿಳಿಸಿದ್ದಾರೆ.