ಸಿಎಂ ಸ್ಥಾನಕ್ಕೆ ಪಟ್ಟು; ಹೈಕಮಾಂಡ್ ನಿರ್ಧರಿಸಲಿ-ಡಿಕೆಶಿ; ಶಾಸಕರ ಅಭಿಪ್ರಾಯ ಸಂಗ್ರಹಿಸಿ-ಸಿದ್ದು
ಬೆಂಗಳೂರು; ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ಗೆ ಸಿಎಂ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಇಂದು ಸಿಎಂ ಸ್ಥಾನವನ್ನು ಹೈಕಮಾಂಡ್ ನಿರ್ಧಾರ ಮಾಡಲಿ. ಶಾಸಕರ ಅಭಿಪ್ರಾಯ ಏನೇ ಇರಲಿ, ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡಲಿ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯ ಮಾತ್ರ ಶಾಸಕರ ಅಭಿಪ್ರಾಯದಂತೆ ನಿರ್ಧಾರ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.
ನಾನು ಸಂಕಷ್ಟದ ಕಾಲದಲ್ಲಿ ಪಕ್ಷದ ನೇತೃತ್ವ ವಹಿಸಿ ಪಕ್ಷವನ್ನು ಮುನ್ನಡೆಸಿದ್ದೇನೆ. ಒಕ್ಕಲಿಗರ ದೊಡ್ಡ ಮಟ್ಟದ ಬೆಂಬಲ ನನಗಿದೆ. ಈ ಬಾರಿ ಒಕ್ಕಲಿಗರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಬಂದಿದೆ. ಹೀಗಾಗಿ, ಸಿಎಂ ಹುದ್ದೆಗೆ ನನ್ನನ್ನು ಪರಿಗಣಿಸಬೇಕು. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡಲಿ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಪರವಾಗಿ ಹೈಕಮಾಂಡ್ ಇದೆ. ಈ ಕಾರಣಕ್ಕಾಗಿಯೇ ಡಿ.ಕೆ.ಶಿವಕುಮಾರ್ ಹೀಗೆ ಹೇಳುತ್ತಿದ್ದಾರೆ.
ಆದ್ರೆ ಸಿದ್ದರಾಮಯ್ಯ ಅವರು ಹೆಚ್ಚಿನ ಶಾಸಕರು ನನ್ನ ಬೆಂಬಲಕ್ಕಿದ್ದಾರೆ. ಶಾಸಕಾಂಗ ಪಕ್ಷದಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿ, ಹೆಚ್ಚು ಶಾಸಕರು ಯಾರ ಪರ ಮತ ಹಾಕುತ್ತಾರೋ ಅವರನ್ನು ಸಿಎಂ ಮಾಡಿ ಎಂದು ಸಿದ್ದರಾಮಯ್ಯ ಕೇಳುತ್ತಿದ್ದಾರೆ.
ಇಬ್ಬರೂ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಂದೆ ಹೇಳಿದ್ದಾರೆ. ಈ ಬಗ್ಗೆ ಮಾತನಾಡಲು ಖರ್ಗೆಯವರು ದೆಹಲಿಗೆ ತೆರಳಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಲಾಗುತ್ತಿದೆ. ಇದೇ ವೇಳೆ ದೆಹಲಿಯಲ್ಲಿ ಮಾತನಾಡಿರುವ ಖರ್ಗೆಯವರು, ಮೂವರು ವೀಕ್ಷಕರು ಬೆಂಗಳೂರಿಗೆ ಹೋಗಿದ್ದಾರೆ. ಶಾಸಕರ ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡುತ್ತಾರೆ. ಅದಾದ ವೀಕ್ಷಕರು ಹೈಕಮಾಂಡ್ಗೆ ಮಾಹಿತಿ ನೀಡಲಿದ್ದಾರೆ. ಅಂತಿಮವಾಗಿ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಖರ್ಗೆ ಹೇಳಿದ್ದಾರೆ.