ಮನೆ ಬಾಗಿಲಿಗೆ ಸೇವೆ ಮೂಲಕ ಭ್ರಷ್ಟಾಚಾರ ನಿಯಂತ್ರಣ: ಸಿಎಂ ಬೊಮ್ಮಾಯಿ
ಬೆಂಗಳೂರು: ಜನರಿಗೆ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಮೂಲಕ ಭ್ರಷ್ಟಾಚಾರ ನಿಯಂತ್ರಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
NEWS X ಕನ್ನಡ ನ್ಯೂಸ್ ಪೋರ್ಟಲ್ ಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಯವರು, ನಮ್ಮ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಜನರಿಗೆ ಸರ್ಕಾರಿ ಸೇವೆಗಳು ಸುಲಭವಾಗಿ ಸಿಗುವಂತೆ ಮಾಡಬೇಕು. ಆಗ ಮಾತ್ರ ಭಷ್ಟಾಚಾರ ನಿಯಂತ್ರಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿ ಬಗ್ಗೆ ಸರ್ಕಾರದ ಮುಂದಿನ ಯೋಜನೆಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಶೇಕಡಾ 35 ರಷ್ಟು ಜನ ಮಾತ್ರ ತಲಾದಾಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉಳಿದ ಶೇ.65 ರಷ್ಟು ಜನ ಯಾವುದೇ ಆದಾಯ ಪಡೆಯುತ್ತಿಲ್ಲ. ಹೀಗಾಗಿ, ಜನರನ್ನು ತಲಾದಾಯದಲ್ಲಿ ಭಾಗಿಯಾಗುವಂತೆ ಮಾಡಬೇಕು. ಇದಕ್ಕಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡಬೇಕು. ತಳಮಟ್ಟದ ಜನಕ್ಕೆ ಹಣಕಾಸಿನ ನೆರವು ಹಾಗೂ ಆರ್ಥಿಕ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರಬೇಕು. ಜನರ ಕಲ್ಯಾಣ ಮಾಡುವುದರ ಮೂಲಕ ರಾಜ್ಯದ ಅಭಿವೃದ್ಧಿ ಮಾಡುವುದು ನನ್ನ ಉದ್ದೇಶ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತದೆ ಎಂದು ಸಿಎಂ ಹೇಳಿದರು.
ಇನ್ನು ಸಿಎಂ ಎಂದರೆ ಜನರಿಂದ ಅಂತರ ಕಾಯ್ದುಕೊಳ್ಳುವುದಲ್ಲ. ಸಿಎಂ ಎಂದರೆ ಕಾಮನ್ ಮ್ಯಾನ್ ರೀತಿ ಇರಬೇಕು ಎಂದು ಬೊಮ್ಮಾಯಿ ಪುನರುಚ್ಚರಿಸಿದರು. ಸಾಮಾನ್ಯನಾಗಿದ್ದು, ಜನ ಸಾಮಾನ್ಯರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಳ್ಳುವುದು, ಅವುಗಳಿಗೆ ಪರಿಹಾರ ಕಂಡುಹಿಡಿಯುವುದು ನನ್ನ ಉದ್ದೇಶ ಎಂದು ಸಿಎಂ ಇದೇ ಸಂದರ್ಭದಲ್ಲಿ ಉತ್ತರಿಸಿದರು.
ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದ್ದರ ಬಗ್ಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆದುಕೊಳುತ್ತಿದ್ದಾರೆ. ಬದಲಾವಣೆ ಮಾಡುವಾಗ ಸಮಸ್ಯೆ ಎದುರಾಗುವುದು ಸಹಜ. ಇದೂ ಕೂಡಾ ಹಾಗೇ ಆಗಿದೆ. ಕಾಯ್ದೆಗಳು ರೈತರ ಪರವಾಗಿದ್ದರೂ, ವಿರೋಧ ವ್ಯಕ್ತವಾಗಿದ್ದರಿಂದ ಪ್ರಧಾನಿ ಮೋದಿಯವರು ಪ್ರಜಾಪ್ರಭುತ್ವಕ್ಕೆ ಗೌರವ ಕೊಟ್ಟಿದ್ದಾರೆ ಎಂದು ಸಿಎಂ ಹೇಳಿದರು.