BengaluruPolitics

ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಮೂರು ಬಾರಿ ರಾಜ್ಯಕ್ಕೆ ಆಗಮನ; ಎಲ್ಲೆಲ್ಲಿ ಭೇಟಿ..?

ಬೆಂಗಳೂರು; ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಕೇಂದ್ರದ ನಾಯಕರು ಹೆಚ್ಚೆಚ್ಚು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಫೆಬ್ರವರಿಯಲ್ಲಿ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ಮೂರು ಬಾರಿ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಫೆಬ್ರವರಿ 6 ರಂದು ಮೋದಿಯವರು ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಫೆಬ್ರವರಿ ಆರರಂದು ಬೆಳಗ್ಗೆ 8.20ಕ್ಕೆ ಪ್ರಧಾನಿ ಮೋದಿಯವರು ದೆಹಲಿಯಿಂದ ಹೊರಡಲಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆಗೆ ಅವರು ಬೆಂಗಳೂರು ತಲುಪಲಿದ್ದಾರೆ. ನಂತರ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಬೆಳಗ್ಗೆ 11.30ಕ್ಕೆ ತುಮಕೂರು ರಸ್ತೆ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯುವ ಭಾರತ ಇಂಧನ ಸಪ್ತಾಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಮಧ್ಯಾಹ್ನ ಹೆಲಿಕಾಪ್ಟರ್‌ ಮೂಲಕ ತುಮಕೂರು ಜಿಲ್ಲೆ ಗುಬ್ಬಿಯ ಬಿಡೇರಹಳ್ಳಿ ಕಾವಲ್‌ಗೆ ತೆರಳಲಿದ್ದಾರೆ. ಅಲ್ಲಿ ಎಚ್‌ಎಎಲ್‌ ಹೆಲಿಕಾಪ್ಟರ್‌ ಉತ್ಪಾದನಾ ಘಟಕವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಸಂಜೆ ಬೆಂಗಳೂರಿಗೆ ವಾಪಸ್‌ ಬಂದು ಅಲ್ಲಿಂದ ದೆಹಲಲಿಗೆ ತೆರಳಲಿದ್ದಾರೆ.

ಇನ್ನು ಫೆಬ್ರವರಿ 27ರಂದು ಮಾಜಿ ಸಿಎಂ ಯಡಿಯೂರಪ್ಪ ಅವರ ಹುಟ್ಟುಹಬ್ಬ ಇದೆ. ಆ ದಿನವೇ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲೂ ಮೋದಿ ಭಾಗವಹಿಸಲಿದ್ದಾರೆ.

Share Post