HealthLifestyle

ಮಧುಮೇಹ ಅಂದರೆ ಏನು..? ಅದನ್ನು ಬರದಂತೆ ತಡೆಯುವುದು ಹೇಗೆ..?

ಮಧುಮೇಹ (ಡಯಾಬಿಟಿಸ್‌) ಎಂಬುದು ಜೀವನಪೂರ್ತಿ ನಮ್ಮೊಂದಿಗಿರುವ ಒಂದು ತೀವ್ರವಾದ ಅನಾರೋಗ್ಯ ಸಮಸ್ಯೆ. ಇದು ಯಾರಿಗೆ ಬೇಕಾದರೂ ಬರಬಹುದು. ಪ್ರತಿ ವರ್ಷ ಪ್ರಪಂಚದಲ್ಲಿ ಸರಾಸರಿ ೧೦ ಲಕ್ಷ ಜನರನ್ನು ಈ ಕಾಯಿಲೆ ಬಲಿ ತೆಗೆದುಕೊಳ್ಳುತ್ತಿದೆ. ನಮ್ಮ ರಕ್ತ ಸೇರುವ ಸಕ್ಕರೆ (ಗ್ಲುಕೋಸ್‌) ಶಕ್ತಿಯಾಗಿ ಮಾರ್ಪಡಿಸುವ ಪ್ರಕ್ರಿಯೆಗೆ ಅಡ್ಡಿ ಉಂಟಾದಾಗ ಈ ಕಾಯಿಲೆ ಶುರುವಾಗುತ್ತೆ. ಇದು ಹೃದಯಾಘಾತ, ಲಕ್ವ, ಕುರುಡುತನ, ಮೂತ್ರಪಿಂಡಗಳ ವೈಫಲ್ಯ, ಪಾದಗಳು, ಕಾಲುಗಳನ್ನು ಕತ್ತರಿಸಬೇಕಾದ ಪರಿಸ್ಥಿತಿಗೂ ಕಾರಣವಾಗಬಹುದು. ಈ ಡಯಾಬಿಟಿಸ್‌ ಸಮಸ್ಯೆ ವರ್ಷ ವರ್ಷಕ್ಕೂ ಬೆಳೆಯುತ್ತಲೇ ಇದೆ. ಪ್ರಸ್ತುತ ಪ್ರಪಂಚದಾದ್ಯಂತ ೪೨.೨ ಮಂದಿಗೆ ಮಧುಮೇಹ ಇದೆ. ನಾಲ್ಕು ದಶಕಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಈಗಿನ ಮಧುಮೇಹಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ಅತ್ಯಂತ ಪ್ರಮಾದಕರವೇ ಆದರೂ, ಮಧುಮೇಹಿಗಳಲ್ಲಿ ಅರ್ಧ ಜನಕ್ಕೆ ತಮಗೆ ಆ ವ್ಯಾಧಿ ಇದೆಯಂದೇ ಗೊತ್ತಿಲ್ಲವಂತೆ..! ತಜ್ಞರು ಹೇಳುವಂತೆ ಜೀವನಶೈಲಿಯಲ್ಲಿ ಕೊಂಚ ಬದಲಾಯಿಸಿಕೊಂಡರೆ ಈ ವ್ಯಾಧಿ ಬರದಂತೆ ತಡೆಯಬಹುದು.

ಮಧುಮೇಹಕ್ಕೆ ಕಾರಣಗಳೇನು..?

ನಾವು ಆಹಾರವನ್ನು ಸೇವಿಸಿದಾಗ, ನಮ್ಮ ದೇಹವು ಕಾರ್ಬೊಹೈಡ್ರೇಟ್‌ಗಳನ್ನು ಸಕ್ಕರೆಯಾಗಿ ವಿಭಜಿಸುತ್ತವೆ. ಇದನ್ನು ಗ್ಲುಕೋಸ್‌ ಎಂದು ಪರಿಗಣಿಸಲಾಗುತ್ತದೆ. ಇನ್ಸುಲಿನ್‌ ಮೇಧೋಜ್ಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗಿ ಹಾರ್ಮೋನ್‌ ಆಗಿದೆ. ಇದು ಶಕ್ತಿಗಾಗಿ ಸಕ್ಕರೆಯನ್ನು ಹೀರಿಕೊಳ್ಳಲು ನಮ್ಮ ದೇಹದ ಜೀವಕೋಶಗಳಿಗೆ ನಿರ್ದೇಶನ ನೀಡುತ್ತದೆ. ಆದರೆ ಆಗ ಇನ್ಸುಲಿನ್‌ ಉತ್ಪತ್ತಿಯಾಗದಿದ್ದಾಗ ಅಥವಾ ಅದು ಸರಿಯಾಗಿ ಕೆಲಸ ಮಾಡದಿದ್ದಾಗ ರಕ್ತದಲ್ಲಿ ಸಕ್ಕರೆ ಸಂಗ್ರಹವಾಗುತ್ತದೆ. ಇದರಿಂದ ಮಧುಮೇಹ ಬರುತ್ತದೆ.

ಮಧುಮೇಹದಲ್ಲಿ ಎಷ್ಟು ವಿಧಗಳಿವೆ..?
ಟೈಪ್‌ ೧ ಡಯಾಬಿಟಿಸ್‌
ಪಾಂಕ್ರಿಯಾಸ್‌ನಿಂದ ಇನ್ಸುಲಿನ್‌ ಉತ್ಪತ್ತಿ ನಿಂತುಹೋಗುತ್ತದೆ. ಇದರ ಫಲಿತಾಂಶವಾಗಿ ರಕ್ತದಲ್ಲಿ ಗ್ಲುಕೋಸ್‌ ಅಂಶ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಯಾಕೆ ಹೀಗೆ ನಡೆಯುತ್ತದೆ ಎಂಬುದಕ್ಕೆ ಸಂಶೋಧಕರು ಇನ್ನೂ ಸ್ಪಷ್ಟವಾದ ಉತ್ತರ ಕಂಡುಹಿಡಿದಿಲ್ಲ. ಆದಾಗ್ಯೂ, ಇದು ಆನುವಂಶಿಕ ಕಾರಣದಿಂದ ಅಥವಾ ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳಿಗೆ ಹಾನಿ ಮಾಡುವ ವೈರಲ್ ಸೋಂಕಿನಿಂದಾಗಿರಬಹುದು ಎಂದು ಶಂಕಿಸಲಾಗಿದೆ. ಮಧುಮೇಹ ಹೊಂದಿರುವ ಸುಮಾರು ಶೇಕಡಾ 10ರಷ್ಟು ಜನರು ಈ ಟೈಪ್-1 ಡಯಾಬಿಟಿಸ್‌ ಹೊಂದಿದ್ದಾರೆ.

ಟೈಪ್ 2 ಡಯಾಬಿಟಿಸ್‌

ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಅಥವಾ ಉತ್ಪತ್ತಿಯಾಗುವ ಇನ್ಸುಲಿನ್ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಇದು ಸಾಮಾನ್ಯವಾಗಿ ಮಧ್ಯವಯಸ್ಕ ಮತ್ತು ವಯಸ್ಸಾದವರಲ್ಲಿ ಕಂಡುಬರುತ್ತದೆ. ಆದಾಗ್ಯೂ, ಟೈಪ್-2 ಮಧುಮೇಹವು ಅಧಿಕ ತೂಕ ಮತ್ತು ದೈಹಿಕವಾಗಿ ಸವಾಲು ಹೊಂದಿರುವ ನಿರ್ದಿಷ್ಟ ಜನಾಂಗದ ಯುವಕರಲ್ಲಿ, ವಿಶೇಷವಾಗಿ ದಕ್ಷಿಣ ಏಷ್ಯಾದವರಲ್ಲಿ ಹೆಚ್ಚು ಕಾಡುತ್ತಿದೆ.
ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಮಧುಮೇಹ ಬರುವ ಸಾಧ್ಯತೆಯೂ ಇದೆ. ಏಕೆಂದರೆ ಅವರ ದೇಹವು ತನ್ನ ಹುಟ್ಟಲಿರುವ ಮಗುವಿಗೆ ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ.

ಮಧುಮೇಹದ ಲಕ್ಷಣಗಳೇನು..?

ಸಾಮಾನ್ಯ ಲಕ್ಷಣಗಳು

೧. ಹೆಚ್ಚಾಗಿ ಬಾಯಾರಿಕೆಯಾಗುವುದು
೨. ಸಾಮಾನ್ಯಕ್ಕಿಂತ ಹೆಚ್ಚಾಗಿ, ಅದರಲ್ಲೂ ರಾತ್ರಿ ವೇಳೆಯಲ್ಲಿ ಹೆಚ್ಚು ಮೂತ್ರ ವಿಸರ್ಜನೆ ಮಾಡುವುದು
೩. ತುಂಬಾ ಆಯಾಸವಾದಂತೆ ಕಂಡಬರುವುದು
೪. ಸುಖಾಸಮ್ಮನೆ ಭಾರ ಕಡಿಮೆಯಾಗಿಬಿಡುವುದು
೫. ಬಾಯಿಯಲ್ಲಿ ಆಗಾಗ ಹುಣ್ಣಾಗುವುದು
೬. ಕಣ್ಣಿನ ದೃಷ್ಟಿ ಅಸ್ಪಷ್ಟವಾಗುವುದು
೭. ಶರೀರದಲ್ಲಿ ಮೇಲೆ ಆಗುವ ಗಾಯಗಳು ಬೇಗ ವಾಸಿಯಾಗದಿರುವುದು


ಮಧುಮೇಹವನ್ನು ನಿವಾರಿಸಬಹುದಾ..?
ಮಧುಮೇಹ ಎಂಬುದು ಅನುವಂಶಿಕ ಮತ್ತು ಪರಿಸರ ಅಂಶಗಳ ಮೇಲೆ ಆಧಾರಿತವಾಗಿದೆ. ಆರೋಗ್ಯಕರ ಆಹಾರ ಮತ್ತು ಸಕ್ರಿಯ ಜೀವನಶೈಲಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಎಷ್ಟು ಜನಕ್ಕೆ ಮಧುಮೇಹ ಇದೆ..?
ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನದ ಪ್ರಕಾರ, ೧೯೮೦ರಲ್ಲಿ ೧೦.೮ ಕೋಟಿ ಮಂದಿ ಮಧುಮೇಹ ರೋಗಿಗಳಿದ್ದರೆ, ೨೦೧೪ರ ವೇಳೆಗೆ ಆ ಸಂಖ್ಯೆ ೪೨.೨ ಕೋಟಿಗೆ ಬೆಳೆದಿತ್ತು. ೧೯೮೦ರಲ್ಲಿ ವಯಸ್ಕರು ಅಂದರೆ ೧೮ ವರ್ಷ ದಾಟಿದವರು ಶೇ.೫ಕ್ಕಿಂತ ಕಡಿಮೆ ಜನಕ್ಕೆ ಡಯಾಬಿಟಿಸ್‌ ಇತ್ತು. ೨೦೧೪ರಲ್ಲಿ ಅದರ ಪ್ರಮಾಣ ಶೇ.೮.೫ಕ್ಕೇರಿತ್ತು.

Share Post