ಕಡಪದಲ್ಲಿ 56 ಲಕ್ಷ ರೂ. ಕದ್ದಿದ್ದ ಆರೋಪಿ ಕರ್ನಾಟಕದಲ್ಲಿ ಪತ್ತೆಯಾದ..!
ಚಿಕ್ಕಬಳ್ಳಾಪುರ; ಆಂಧ್ರದ ಕಡಪದಲ್ಲಿ ಎಟಿಎಂಗೆ ತುಂಬಿಸಬೇಕಿದ್ದ ಹಣದ ಜೊತೆ ಎಸ್ಕೇಪ್ ಆಗಿದ್ದ ಡ್ರೈವರ್ ಕರ್ನಾಟಕದಲ್ಲಿ ಸಿಕ್ಕಿಬಿದ್ದಿದ್ದಾನೆ. ಆದ್ರೆ ಆತ ಹಣ ಹಾಗೂ ಕಾರು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಎಟಿಎಂಗೆ ತುಂಬಿಸುವ ವಾಹನದೊಂದಿಗೆ ಅದರ ಡ್ರೈವರ್ ನಾಪತ್ತೆಯಾಗಿದ್ದ. ಕಡಪದಿಂದ ಕೆಲದೂರ ಬಂದು ವಾಹನ ಅಲ್ಲೇ ಬಿಟ್ಟು ೫೬ ಲಕ್ಷ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದ. ಇದೀಗ ಆತ, ಬಾಗೇಪಲ್ಲಿ ಟೋಲ್ ಬಳಿ ಸಿಕ್ಕಿಬಿದ್ದಿದ್ದಾನೆ.
ಆಂಧ್ರ ಪ್ರದೇಶದ ಕಡಪ ನಗರದ ಎಸ್.ಬಿ.ಐ ಬ್ಯಾಂಕ್ಗೆ ಸೇರಿದ ಹಣವನ್ನು ಸಿ.ಎಂ.ಎಸ್ ಕಂಪನಿಯು ಎ.ಟಿ.ಎಂ ಗಳಿಗೆ ತುಂಬಿಸುವ ಗುತ್ತಿಗೆ ಪಡೆದಿದೆ. ಹಣ ಸಾಗಿಸುವ ವಾಹನದ ಚಾಲಕನಾಗಿದ್ದ ಫಾರೂಕ್ ಎನ್ನುವಾತ ಸ್ವತಃ ತಾನೆ ಕಡಪದಲ್ಲಿ ಬೇರೊಂದು ಕಾರನ್ನು ತರಿಸಿ ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಹಣ ಶಿಫ್ಟ್ ಮಾಡಿದ್ದಾನೆ. ನಂತರ ಕಂಪನಿಯ ವಾಹನವನ್ನು ಅಲ್ಲಿಯೇ ಬಿಟ್ಟು 56 ಲಕ್ಷ ರೂಪಾಯಿ ನಗದು ಜೊತೆ ಎಸ್ಕೇಪ್ ಆಗಿದ್ದ.
ಇದನ್ನರಿತ ಕಡಪ ಪೊಲೀಸರು ತನಿಖೆ ನಡೆಸುತ್ತಿದ್ದ ಸಮಯದಲ್ಲಿಯೇ, ಇತ್ತ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಠಾಣೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ 44 ರ ಬಾಗೇಪಲ್ಲಿ ಟೋಲ್ ಬಳಿ ಫಾರೂಕ್ ಚಲಾಯಿಸುತ್ತಿದ್ದ ಎಪಿ39, ಎಚ್.ಜಿ 3109 ಟಾಟಾ ಇಟಿಯಸ್ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಪೊಲೀಸರನ್ನು ನೋಡಿದ ಆರೋಪಿ ಫಾರೂಕ್ ಸ್ಥಳದಲ್ಲೆ ಹಣ ಹಾಗೂ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು ಕಾರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಾರಿನಲ್ಲಿ 53 ಲಕ್ಷ 50 ಸಾವಿರ ರೂಪಾಯಿ ನಗದು ಪತ್ತೆಯಾಗಿದೆ.