ನಾಯಿ ವಿಚಾರದಲ್ಲಿ ಮನೆಯಲ್ಲಿ ಜಗಳ; ತಾಯಿ-ಮಗಳು ಆತ್ಮಹತ್ಯೆ
ಬೆಂಗಳೂರು; ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ನಡೆದ ಜಗಳ ಇಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಗೋವಿಂದ ಪುರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಿವ್ಯಾ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡವರು. ನಾಯಿ ವಿಚಾರಕ್ಕೆ ಅತ್ತೆ-ಮಾವನ ಜೊತೆ ದಿವ್ಯಾ ಜಗಳ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದಿವ್ಯಾ ನೇಣಿಗೆ ಶರಣಾಗಿದ್ದು, ಇದನ್ನು ನೋಡಿ ಆಕೆಯ ಮಗಳೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ದಿವ್ಯಾ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಆದ್ರೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಿವ್ಯಾಗೆ ವೈದ್ಯರು ಮನೆಯಲ್ಲಿ ನಾಯಿಯನ್ನು ಇಟ್ಟುಕೊಳ್ಳಬೇಡಿ ಎಂದಿದ್ದರಂತೆ. ಹೀಗಾಗಿ ಅತ್ತೆ-ಮಾವನಿಗೆ ನಾಯಿಯನ್ನು ಯಾರಿಗಾದರೂ ಕೊಟ್ಟುಬಿಡಿ ಎಂದು ದಿವ್ಯಾ ಹೇಳಿದ್ದರಂತೆ. ಆದ್ರೆ ಇದಕ್ಕೆ ಅತ್ತೆ-ಮಾವ ಒಪ್ಪಿಲ್ಲ. ಇದರಿಂದ ಜಗಳ ನಡೆದಿದ್ದು, ಈ ವೇಳೆ ದಿವ್ಯಾ ಹಾಗೂ ಅವರ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.