ಗಂಡು ಮರಿಗೆ ಜನ್ಮ ನೀಡಿದ ದಸರಾ ಆಣೆ ಲಕ್ಷ್ಮೀ
ಮೈಸೂರು; ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿರುವ ಗಜಪಡೆಯಲ್ಲಿರುವ 22 ವರ್ಷದ ಲಕ್ಷ್ಮೀ ಎಂಬ ಆನೆ ಗಂಡು ಮರಿಗೆ ಜನ್ಮ ನೀಡಿದೆ. ಇದರಿಂದಾಗಿ ಅರಮನೆ ಆವರಣದಲ್ಲಿ ಕಳೆ ಬಂದಿದೆ. ಮರಿಯನ್ನು ನೋಡಲು ಜನ ಆಗಮಿಸುತ್ತಿದ್ದಾರೆ.
ನಿನ್ನೆ ಮಧ್ಯಾಹ್ನ ಆನೆ ಲಕ್ಷ್ಮಿ ವರ್ತನೆಯಲ್ಲಿ ಬದಲಾವಣೆ ಕಾಣಿಸಿತ್ತು. ಆಗ ವೈದ್ಯರು ಆನೆಯನ್ನು ಪರೀಕ್ಷಿಸಿದ್ದಾಗ ಲಕ್ಷ್ಮಿ ತುಂಬು ಗರ್ಭಿಣಿ ಎಂಬುದು ಗೊತ್ತಾಗಿದೆ. ತಕ್ಷಣ ಲಕ್ಷ್ಮಿಯನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ರಾತ್ರಿ 8.10ರ ಸುಮಾರಿಗೆ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಈ ಮರಿಗೆ ಗಣಪತಿ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.
ದಸರಾ ವೇಳೆ ಗಜಪಡೆಯ ಸದಸ್ಯೆ ಮರಿ ಹಾಕುತ್ತಿರುವ ಎರಡನೇ ಪ್ರಸಂಗವಿದು. 15 ವರ್ಷಗಳ ಹಿಂದೆ ದಸರಾ ಗಜಪಡೆಯ ಸದಸ್ಯೆಯಾಗಿ ಬಂದಿದ್ದ ಸರಳ ಆನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಮರಿಗೆ ಚಾಮುಂಡಿ ಎಂದು ಹೆಸರಿಡಲಾಗಿತ್ತು. ಈಗ ಲಕ್ಷ್ಮಿಯ ಪುತ್ರನನ್ನು ಕಂಡು ಗಜಪಡೆಯ ಮಾವುತರು, ಕಾವಾಡಿಗಳು, ಅರಣ್ಯಾಧಿಕಾರಿಗಳು ಖುಷಿಯಾಗಿದ್ದಾರೆ.
ಲಕ್ಷ್ಮಿ ಆನೆ 2017 ರಲ್ಲಿ ಮೊದಲ ಬಾರಿಗೆ ನಾಡಹಬ್ಬದ ಮೆರವಣಿಗೆಗೆ ಕಾಡಿ ನಿಂದ ನಾಡಿಗೆ ಬಂದಿತ್ತು. ಆಗ ಸಿಡಿಮದ್ದಿನ ಶಬ್ದಕ್ಕೆ ಲಕ್ಷ್ಮಿ ಬೆಚ್ಚುತ್ತಿದ್ದ ಕಾರಣ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಈಗ ಎರಡನೇ ಬಾರಿಗೆ ಲಕ್ಷ್ಮಿಯನ್ನು ನಾಡಹಬ್ಬದ ಮೆರವಣಿಗೆಗೆ ಕರೆಸಲಾಗಿದೆ.