ಖ್ಯಾತ ತೆಲುಗು ನಟ ಕೃಷ್ಣಂರಾಜು ವಿಧಿವಶ; ಗಣ್ಯರ ಸಂತಾಪ
ಹೈದರಾಬಾದ್; ಖ್ಯಾತ ತೆಲುಗು ಚಲನಚಿತ್ರ ನಟ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು ಅವರು ಭಾನುವಾರ ಮುಂಜಾನೆ ಹೈದರಾಬಾದ್‌ನಲ್ಲಿ ನಿಧನರಾದರು. ಅವರ ನಿಧನಕ್ಕೆ ಹಲವು ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.
ಕೃಷ್ಣರಾಜ ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಕೂಡಾ ಕೆಲಸ ಮಾಡಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೆಲ ದಿನಗಳಿಂದ ಮಧುಮೇಹ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದರು ಎಂದು ಅವರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ಕೂಡ ನಡೆದಿತ್ತು. ಅವರು ತೀವ್ರ ಮೂತ್ರಪಿಂಡ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಕೋವಿಡ್ ನಂತರದ ತೊಂದರೆಗಳಿಂದಾಗಿ ಕೃಷ್ಣಂರಾಜು ಅವರನ್ನು ಆಗಸ್ಟ್ 05 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದಾಗಿನಿಂದ ವೆಂಟಿಲೇಟರ್‌ನಲ್ಲಿಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಅವರು ಸೆಪ್ಟೆಂಬರ್ 11 ರಂದು ಮುಂಜಾನೆ ನಿಧನರಾದರು. ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರಿದ್ದಾರೆ. ಕೃಷ್ಣಂರಾಜು ಅವರು ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಚಿಕ್ಕಪ್ಪ ಕೂಡಾ ಹೌದು.