ಮಾಂಸಾಹಾರ ಸೇವಿಸಿ ಸಿದ್ದರಾಮಯ್ಯ ದೇಗುಲ ಪ್ರವೇಶ; ಜೋರಾಯ್ತು ರಾಜಕೀಯ ಕೆಸರೆರಚಾಟ
ಬೆಂಗಳೂರು; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಳಿ ಸಾರು ಊಟ ಮಾಡಿ ಕೊಡಗಿನ ಕೊಡ್ಲಿಪೇಟೆ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ವಿಚಾರ ಸದ್ದು ಮಾಡುತ್ತಿದೆ. ಈ ಹಿಂದೆ ಅವರು ಮೀನೂಟ ಸೇವಿಸಿ ಧರ್ಮಸ್ಥಳ ಕ್ಷೇತ್ರದಲ್ಲಿ ದರ್ಶನ ಪಡೆದಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ನಡುವೆ ಆಗಸ್ಟ್ ೧೮ರಂದು ಕೊಡಗಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಕೋಳಿ ಮಾಂಸದ ಊಟ ಮಾಡಿ, ನಂತರ ದೇಗುಲಕ್ಕೆ ಭೇಟಿ ನೀಡಿದ್ದರೆಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಸಂಬಂಧ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ ಹೊರಹಾಕಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಕಾಂಗ್ರೆಸ್‌ನವರಿಗೆ ಯಾವ ಸಂಸ್ಕೃತಿಯೂ ಇಲ್ಲ, ದೇವಸ್ಥಾನ ಸಂಸ್ಕೃತಿಯಂತೂ ಇಲ್ಲ. ಧರ್ಮಸ್ಥಳ ಕ್ಷೇತ್ರಕ್ಕೆ ಮೀನು, ಮಾಂಸ ತಿಂದುಕೊಂಡು ಹೋಗುತ್ತಾರೆ. ಮೊನ್ನೆ ಮಡಿಕೇರಿಗೆ ಬಂದಾಗ ಕೋಳಿ ಸಾರು ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ. ಮಡಿಕೇರಿಯಲ್ಲಿ ಮಾಂಸ ತಿಂದು ಅಂದೇ ಕೊಡ್ಲಿಪೇಟೆ ಬಸವೇಶ್ವರ ದೇವಾಲಯಕ್ಕೆ ಹೋಗಿದ್ದಾರೆ. ಇವರಿಗೆ ದೇವರ ಮೇಲೆ ಭಕ್ತಿ ಇದೆಯಾ? ಇವರೆಲ್ಲಾ ದೇವಸ್ಥಾನಕ್ಕೆ ಯಾಕೆ ಹೋಗೋದು ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇಗುಲ ಭೇಟಿ ಮಾಡಿದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರಿಗೆ ಆಗಸ್ಟ್ ೧೮ರಂದು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಊಟ ಬಡಿಸಿದ್ದರು. ಅವರು ಈ ಬಗ್ಗೆ ಮಾತನಾಡಿದ್ದು, ಸಿದ್ದರಾಮಯ್ಯ ಅಂದು ಮಾಂಸಾಹಾರ ಸೇವಿಸಿಲ್ಲ. ಕಣಿಲೆ ಪಲ್ಯ ಹಾಗೂ ಅಕ್ಕಿ ರೊಟ್ಟಿಯನ್ನು ಸೇವಿಸಿದ್ದಾರೆ. ಅದನ್ನು ನಾನೇ ಬಡಿಸಿದ್ದು ಎಂದು ಹೇಳಿದ್ದಾರೆ.
ಈ ನಡುವೆ ಭಾನುವಾರ ಚಿಕ್ಕಬಳ್ಳಾಪುರದಲ್ಲಿ ಕೂಡಾ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇಗುಲ ಪ್ರವೇಶಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ. ರಾತ್ರಿ ನಾನ್‌ವೆಜ್ ತಿಂದು ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದು, ಮಧ್ಯಾಹ್ನ ತಿಂದು ಸಂಜೆ ಹೋಗಬಾರದಾ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ದೇವರು ಇಂತಹದ್ದನ್ನೆ ತಿಂದುಕೊಂಡು ಬನ್ನಿ ಅಂತ ಹೇಳುತ್ತಾರಾ ಎಂದು ಪತ್ರಕರ್ತರಿಗೆ ಸಿದ್ದರಾಮಯ್ಯ ಮರು ಪ್ರಶ್ನಿಸಿದ್ದಾರೆ. ತಾವು ಅಂದು ಊಟ ಮಾಡಿದ್ದು ಸುದರ್ಶನ ಗೆಸ್ಟ್‌ಹೌಸ್‌ನಲ್ಲಿ, ಮಧ್ಯಾಹ್ನ 2.30ರ ಸಮಯದಲ್ಲಿ. ಸಂಜೆ ಹೋಗುವಾಗ ಪೂಜೆ ಏರ್ಪಾಟು ಮಾಡಿದ್ದರು. ಅದಕ್ಕೆ ಹೋಗಿದ್ದೆ ಎಂದು ಸಮರ್ಥಿಸಿಕೊಂಡರು.