ನಾಳೆ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ; ಬೃಹತ್ ವೇದಿಕೆ ರೆಡಿ
ದಾವಣಗೆರೆ; ನಾಳೆ ಸಿದ್ದರಾಮಯ್ಯ ಅವರ 75 ನೇ ವರ್ಷದ ಜನ್ಮ ದಿನೋತ್ಸವ ನಡೆಯಲಿದೆ. ಇದಕ್ಕಾಗಿ ದಾವಣಗೆರೆ ಶಾಮನೂರು ಪ್ಯಾಲೇಸ್ ಗ್ರೌಂಡ್ ನಲ್ಲಿ ಭರ್ಜರಿ ಸಿದ್ಧತೆಯಾಗಿದೆ. ವೇದಿಕೆ, ಪೆಂಡಾಲ್, ಆಸನ ವ್ಯವಸ್ಥೆ ಎಲ್ಲವೂ ರೆಡಿಯಾಗಿದೆ. ದಾವಣಗೆರೆಯಲ್ಲಿ ಎಲ್ಲೆಲ್ಲೂ ಕಟೌಟ್ಗಳು, ಬ್ಯಾನರ್ಗಳೇ ರಾರಾಜಿಸುತ್ತಿವೆ.
200/100 ಅಳತೆ ಮುಖ್ಯ ವೇದಿಕೆ ಸಿದ್ಧವಾಗಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಬಿಕೆ ಹರಿಪ್ರಸಾದ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಮುಖಂಡರು ವೇದಿಕೆಯಲ್ಲಿರುತ್ತಾರೆ. ಮುಖ್ಯವೇದಿಕೆಗೆ ಹೊಂದಿಕೊಂಡು ಕಾರ್ಯಕರ್ತರು, ಮುಖಂಡರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಐದರಿಂದ ಆರು ಉಪವೇದಿಕೆಗಳು ಕೂಡಾ ಇವೆ. 5 ಲಕ್ಷ ಕಾರ್ಯಕರ್ತರು ಕುಳಿತುಕೊಳ್ಳಲು ಚೇರ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಉಪವೇದಿಕೆಗಳಲ್ಲೂ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್ ಇ ಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಮೂಲೆ ಮೂಲೆಯಿಂದ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವ ಹಿನ್ನಲೆಯಲ್ಲಿ ಅವರಿಲ್ಲರಿಗೂ ಊಟ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯಿಂದಲೇ ತಿಂಡಿ ಊಟದ ವ್ಯವಸ್ಥೆ ಇರುತ್ತದೆ. ಮೊಸರನ್ನ, ಪಲಾವ್, ಬಿಸಿಬೇಳೆ ಬಾತ್ ಜೊತೆ ಮೈಸೂರು ಪಾಕ್ ಊಟದ ಮೆನುವಿನಲ್ಲಿದೆ. ಒಂದು ವಾರದಿಂದ ಹಾಲು, ತುಪ್ಪ, ಎಣ್ಣೆಯಿಂದ 5 ಲಕ್ಷ ಗರಿಗರಿ ಮೈಸೂರು ಪಾಕ್ ತಯಾರಿಸಲಾಗಿದೆ. ಒಂದೇ ಬಾರಿ 10 ಸಾವಿರ ಕಾರ್ಯಕರ್ತರಿಗೆ ಉಣಬಡಿಸುವುದಕ್ಕೆ ಕೌಂಟರ್ ಗಳು ಸಜ್ಜಾಗಿವೆ. ಸುಮಾರು 2500 ಅಡುಗೆ ಸಿಬ್ಬಂದಿ ಅಡುಗೆ ತಯಾರಿಯಲ್ಲಿ ನಿರತರಾಗಿದ್ದಾರೆ.
ಸಿದ್ದರಾಮೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಆಗಸ್ಟ್ 2 ಮತ್ತು 3 ರಂದು ದಾವಣಗೆರೆಯ ಎಲ್ಲಾ ಹೋಟೆಲ್, ಲಾಡ್ಜ್ ಗಳು ಬುಕ್ ಆಗಿವೆ. ರಾಜ್ಯದ ಮೂಲೆ ಮೂಲೆಯಿಂದ ಬರುವ ಲೀಡರ್ ಗಳು, ಭದ್ರತಾ ಕಾರ್ಯಕ್ಕೆ ಬರುವ ರಕ್ಷಣಾ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ ಉಳಿದುಕೊಳ್ಳಲು ಕಾಂಗ್ರೆಸ್ ಮುಖಂಡರೇ ಎಲ್ಲಾ ಹೋಟೆಲ್, ಲಾಡ್ಜ್ ಗಳನ್ನು ಬುಕ್ ಮಾಡಿಕೊಂಡಿದ್ದಾರೆ.