ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು ತಿಳಿಯುವುದು ಹೇಗೆ..?
ಈಗ ನಾವು ಎಲ್ಲಾ ವ್ಯವಹಾರವನ್ನೂ ಮೊಬೈಲ್ ಮೂಲಕವೇ ನಡೆಸುತ್ತೇವೆ. ಬ್ಯಾಂಕಿಂಗ್ ವ್ಯವಹಾರವೂ ಮೊಬೈಲ್‌ನಿಂದಲೇ ಆಗುತ್ತದೆ. ಹೀಗಾಗಿ ನಮ್ಮ ಮೊಬೈಲ್ ಹ್ಯಾಕ್ ಆದರೆ ನಮ್ಮ ಬ್ಯಾಂಕ್ ಅಕೌಂಟ್‌ಗಳಲ್ಲಿನ ಹಣ ಮಂಗಮಾಯವಾಗಿಬಿಡುತ್ತದೆ. ಹೀಗಾಗಿ ಮೊಬೈಲ್ ಹ್ಯಾಕ್ ಬಗ್ಗೆ ಹಲವರಿಗೆ ಆತಂಕಗಳಿವೆ. ಹಾಗಾದರೆ ಮೊಬೈಲ್ ಹ್ಯಾಕ್ ಆಗಿದೆ ಎಂದು ತಿಳಿಯುವುದು ಹೇಗೆ..? ಇಲ್ಲಿ ಒಂದಷ್ಟು ವಿಚಾರಗಳಿವೆ.
ನಿಮ್ಮ ಮೊಬೈಲ್‌ಫೋನ್ ಬ್ಯಾಟರಿ ಸಾಮರ್ಥ್ಯ ವೇಗವಾಗಿ ಕುಗ್ಗುತ್ತಿದ್ದರೆ ಅಪಾಯಕಾರಿ ಆ್ಯಪ್‌ಗಳ ಮೂಲಕ ಮಾಲ್‌ವೇರ್ ಅಥವಾ ಸ್ಪೈವೇರ್ ಫೋನ್‌ಗೆ ಹೊಕ್ಕಿರುವ ಸಾಧ್ಯತೆ ಇರುತ್ತದೆ. ಆದರೆ ಬ್ಯಾಕ್‌ಗ್ರೌಂಡ್‌ನಲ್ಲೂ ಕೆಲವು ಆ್ಯಪ್‌ಗಳು ಕ್ರಿಯಾಶೀಲವಾಗಿರುವುದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತಿರುತ್ತದೆ. ಹೀಗಾಗಿ ಮೊದಲು ಅಂಥ ಆ್ಯಪ್‌ಗಳನ್ನು ನಿಯಂತ್ರಿಸಬೇಕು. ಆದರೂ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತಿದ್ದರೆ ಪರಿಶೀಲಿಸಬೇಕು. ನಿಮ್ಮ ಪ್ರಮೇಯವಿಲ್ಲದೆ ಆ್ಯಪ್‌ಗಳು ಡೌನ್‌ಲೋಡ್ ಆಗಿದ್ದರೆ, ಡಿಲೀಟ್ ಮಾಡಿದ ನಂತರವೂ ಪುನಃ ಡೌನ್‌ಲೋಡ್ ಆಗುತ್ತಿದ್ದರೆ ನಿಮ್ಮ ಮೊಬೈಲ್‌ಫೋನ್ ಹ್ಯಾಕ್ ಆಗಿರಬಹುದು.
ಇನ್ನು ನಿತ್ಯ ಬಳಸುವ ಇಂಟರ್‌ನೆಟ್ ಡೇಟಾ ಪ್ರಮಾಣಕ್ಕಿಂತ ಹೆಚ್ಚು ಖರ್ಚಾಗುತ್ತಿದ್ದರೆ ಮಾಲ್‌ವೇರ್‌ಗಳು ಮೊಬೈಲ್‌ಫೋನ್‌ನಲ್ಲಿ ಕ್ರಿಯಾಶೀಲವಾಗಿರುವ ಸಾಧ್ಯತೆ ಇರುತ್ತದೆ. ಹಾನಿಕಾರಕ ಆ್ಯಪ್‌ಗಳು ಅಥವಾ ತಂತ್ರಾಂಶಗಳು ಹಿನ್ನೆಲೆಯಲ್ಲಿ ಡೇಟಾ ಬಳಸುತ್ತಿರಬಹುದು. ಇದ್ದಕ್ಕಿದ್ದಂತೆಯೇ ಫೋನ್ ಸ್ಲೋ ಆಗುವುದು, ಯಾವುದಾದರೂ ಆ್ಯಪ್ ಅಥವಾ ಗೇಮಿಂಗ್ ತಂತ್ರಾಂಶ ತೆರೆದಾಗ ಕಿರಿಕಿರಿ ಎನಿಸಿದರೆ ಕುತಂತ್ರಾಂಶಗಳು ಹೊಕ್ಕಿರಬಹುದು. ಇದ್ದಕ್ಕಿದ್ದಂತೆ ಫೋನ್ ಕ್ರ್ಯಾಶ್ ಆಗುವುದು, ಲೋಡಿಂಗ್ ಸಮಯದಲ್ಲಿ ವಿಫಲವಾಗುವುದು ಇಂತಹ ಸಮಸ್ಯೆಗಳು ಎದುರಾದರೆ ಎಚ್ಚರದಿಂದಿರಬೇಕು. ನಿಮ್ಮ ಗ್ಯಾಲರಿಯಲ್ಲಿ ನೀವು ಚಿತ್ರೀಕರಿಸದ ಚಿತ್ರಗಳು, ವಿಡಿಯೊಗಳು ಕಾಣಿಸಿಕೊಂಡರೆ ಅಥವಾ ಇತರರ ಮೊಬೈಲ್‌ಫೋನ್‌ಗಳಿಂದ ನಿಮ್ಮ ಫೋನ್‌ಗೆ ಬಂದಿದ್ದರೆ ಪರಿಶೀಲಿಸಬೇಕು. ನಿಮ್ಮ ಫೋನ್ ಕ್ಯಾಮೆರಾ ಇತರರ ನಿಯಂತ್ರಣಕ್ಕೆ ಸಿಕ್ಕಿದೆ ಎಂಬುದಕ್ಕೆ ಇದೊಂದು ಸಂಕೇತ. ನಿಮ್ಮ ಫೋನ್ ಬಳಕೆಯಲ್ಲಿ ಇಲ್ಲದಿದ್ದರೂ ಫ್ಲ್ಯಾಶ್‌ಲೈಟ್ ಮಿನುಗುತ್ತಿದ್ದರೆ ಎಚ್ಚರಿಕೆಯಾಗಿ ಪರಿಗಣಿಸಬೇಕು. ಹೆಚ್ಚು ಹೊತ್ತು ಬಳಸಿದರೆ ಹಲವು ಸ್ಮಾರ್ಟ್‌ಫೋನ್‌ಗಳು ಬಿಸಿಯಾಗುತ್ತವೆ. ಬಳಸದಿದ್ದರೂ ಬಿಸಿಯಾಗುತ್ತಿದ್ದರೆ ಹಿನ್ನೆಲೆಯಲ್ಲಿ ಕುತಂತ್ರಾಂಶಗಳು ಕ್ರಿಯಾಶೀಲವಾಗಿರುವ ಸಾಧ್ಯತೆ ಇರುತ್ತದೆ.