ರಾಜ್ಯದ ʼಮೆಂಟಲ್ ಹೆಲ್ತ್ ಇನೀಶಿಯೇಟಿವ್ʼ ಮೆಚ್ಚಿದ ಕೇಂದ್ರ ಸರ್ಕಾರ; ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು; ಮಾನಸಿಕ ರೋಗಿಗಳ ನೆರವಿಗಾಗಿ ರಾಜ್ಯದಲ್ಲಿ ಆರಂಭಿಸಿದ ʼಮೆಂಟಲ್ ಹೆಲ್ತ್ ಇನೀಶಿಯೇಟಿವ್ʼ ಅನ್ನು ಕೇಂದ್ರ ಸರ್ಕಾರ ಮೆಚ್ಚಿದ್ದು, ದೇಶದಾದ್ಯಂತ ಈ ಕಾರ್ಯಕ್ರಮವನ್ನು ಜಾರಿ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಿಮ್ಹಾನ್ಸ್ ಸಂಸ್ಥೆಯನ್ನು ಅಭಿನಂದಿಸುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಿಮ್ಹಾನ್ಸ್‌ನಲ್ಲಿ ವಿಶ್ವ ಮೆದುಳು ಆರೋಗ್ಯ ದಿನ ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ʼಬ್ರೈನ್ ಹೆಲ್ತ್ ಕ್ಲಿನಿಕ್ʼ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಮಾಡಿದ ವೈದ್ಯರಿದ್ದಾರೆ. ಮಾನಸಿಕ ರೋಗಿಗಳು ಇವರ ಬಳಿ ಬಂದಾಗ ಚಿಕಿತ್ಸೆ ನೀಡಲು ವಿಶೇಷ ತರಬೇತಿ ಬೇಕು. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ನಿಮ್ಹಾನ್ಸ್‌ನ ತಜ್ಞರು ಈಗಾಗಲೇ 100 ವೈದ್ಯರಿಗೆ ತರಬೇತಿ ನೀಡಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಮಾನಸಿಕ ರೋಗಿಗಳು ನೇರವಾಗಿ ನಿಮ್ಹಾನ್ಸ್‌ಗೆ ಬರದೇ ಸ್ಥಳೀಯ ಮಟ್ಟದಲ್ಲೇ ಸೇವೆ ಪಡೆಯಬಹುದು ಎಂದು ತಿಳಿಸಿದರು.
ವೈದ್ಯರಿಗೆ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ತರಬೇತಿ ಕೊಡುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಚರ್ಚೆ ನಡೆದಿತ್ತು. ಕೋವಿಡ್ ಬಂದ ಆರಂಭದಲ್ಲಿ ರೋಗಿಯೊಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊರೊನಾ ಪಾಸಿಟಿವ್ ಎಂದು ವರದಿ ಬಂದ ಕೂಡಲೇ ಅವರು ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದರು. ರೋಗದಿಂದ ಸಾಯುವುದಕ್ಕಿಂತ ಭಯದಿಂದಲೇ ಕೆಲವರು ಸತ್ತಿದ್ದರು. ಇಂತಹ ರೋಗಿಗಳಿಗೆ ಆಪ್ತ ಸಮಾಲೋಚನೆ ಅಗತ್ಯವಿದೆ. ಇದಕ್ಕಾಗಿ ನಿಮ್ಹಾನ್ಸ್ ಸಹಯೋಗದಲ್ಲಿ ಆಪ್ತ ಸಮಾಲೋಚನೆ ಆರಂಭಿಸಲಾಯಿತು. ಜೊತೆಗೆ ಇದರಲ್ಲೇ ಆನ್‌ಲೈನ್ ಸೇವೆಯನ್ನೂ ಆರಂಭಿಸಲಾಯಿತು. ಇದು ಯಶಸ್ವಿಯಾಗಿದ್ದು, ಒಂದೂವರೆ ವರ್ಷದಲ್ಲಿ 25 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ. ದೇಶದಲ್ಲಿ ಬೇರೆಲ್ಲೂ ಇಂತಹ ಕಾರ್ಯ ಆಗಿಲ್ಲ ಎಂದರು.