ಸಿದ್ದರಾಮಯ್ಯ ಬಣ್ಣ ಬಯಲಾಗಿದೆ; ಮಾಜಿ ಸಿಎಂ ಹೆಚ್ಡಿಕೆ
ಬೆಂಗಳೂರು; ಸಿದ್ದರಾಮಯ್ಯ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಹೊರಟಿದ್ದಾರೆ. ಈ ಮೂಲಕ ಅವರ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಟಿ ರವಿ ಕಾಂಗ್ರೆಸ್ ಕಚೇರಿಗೆ ಧನ್ಯವಾದ ತಿಳಿಸಲು ತೆರಳಿದ್ದರು. ಬಿಜೆಪಿ ಬಿ ಟೀಂ ಯಾವುದು ಎಂಬುದು ಇದರಿಂದಾಗಿ ಬಯಲಾದಂತಾಗಿದೆ. ಬಿಜೆಪಿ ನಾಯಕ ಈಶ್ವರಪ್ಪ ಕೂಡಾ ಸಿದ್ದರಾಮಯ್ಯ ನಮ್ಮನ್ನು ಗೆಲ್ಲಿಸುತ್ತಾರೆ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಸಿದ್ದರಾಮಯ್ಯ ಅಲ್ಪಸಂಖ್ಯಾತ ಅಭ್ಯರ್ಥಿ ಹೆಸರಿನಲ್ಲಿ ಅನುಕಂಪ ಗಿಟ್ಟಿಸಲು ಹೋಗಿ, ಖೆಡ್ಡಾಗೆ ಬಿದ್ದಿದ್ದಾರೆ.
ಇವರೆಲ್ಲಾ ನಕಲಿ ಕಾಂಗ್ರೆಸಿನವರು, ನಕಲಿ ಜಾತ್ಯತೀತರು. ಜೆಡಿಎಸ್‌ಗೆ 2ನೇ ಪ್ರಾಶಸ್ತ್ಯದ ಮತ ಕೂಡಾ ಹಾಕಬೇಡಿ ಎಂದು ಹೇಳಿದ್ದಾರೆ. ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್‌ಗೆ ಮತ ಹಾಕುತ್ತೇನೆ ಎಂದಿದ್ದಾರೆ. ಶಾಸಕ ರಮೇಶ್ ಕುಮಾರ್ ಅವರ ಬ್ರೈನ್ ವಾಶ್ ಮಾಡಿದ್ದಾರೆ. ಇದು ಹೆಸರಿಗೆ ಮಾತ್ರ ಪಕ್ಷಾಂತರ ನಿಷೇಧ, ಈ ನಿಯಮ ಯಾವುದೇ ಉಪಯೋಗಕ್ಕೂ ಬರುವುದಿಲ್ಲ ಎಂದು ಕಿಡಿ ಕಾರಿದರು.
ಕಳೆದ ಬಾರಿ ಅಡ್ಡ ಮತದಾನ ಮಾಡಿದವರಿಗೆ ಜನ ಪಾಠ ಕಲಿಸಿದ್ದಾರೆ. ಈಗಲೂ ಅವರಿಗೆ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌ನವರಿಗೆ ಹೊಸ ಅಧ್ಯಾಯ ಶುರು ಮಾಡೋಣ ಎಂದು ಹೇಳಿದ್ದೆ, ಆದರೆ ಅವರು ಒಪ್ಪಲಿಲ್ಲ. ಅವರಿಗೆ ಜಾತ್ಯತೀತ ಪಕ್ಷಗಳು ಉಳಿಯುವುದು ಇಷ್ಟ ಇಲ್ಲ. ಈಗ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಇನ್ನು ಮುಂದೆ ನಾವು ಅವರೊಂದಿಗೆ ಹೋಗಲ್ಲ. ಸ್ವತಂತ್ರವಾಗಿಯೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.