ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ; ಈಶ್ವರಪ್ಪ ರಾಜೀನಾಮೆ ಪಡೆಯುವ ಸಾಧ್ಯತೆ
ಬೆಂಗಳೂರು: ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ.
ಘಟನೆ ಸಂಬಂಧ ಹೈಕಮಾಂಡ್ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಇನ್ನೊಂದೆಡೆ ತಡರಾತ್ರಿ ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿರುವ ಮಾಹಿತಿಯೂ ಹೈಕಮಾಂಡ್ ಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಅವರ ರಾಜೀನಾಮೆ ಪಡೆಯುವಂತೆ ಸೂಚನೆ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.
ಇನ್ನು ಎಫ್ಐಆರ್ ದಾಖಲಾದ ನಂತರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸೇರಿದಂತೆ ಹೈಕಮಾಂಡ್ ನ ಕೆಲ ನಾಯಕರೊಂದಿಗೆ ದೂರವಾಣಿ ಮೂಲಕ ಸಚಿವ ಈಶ್ವರಪ್ಪ ಮಾತುಕತೆ ನಡೆಸಿದ್ದಾರೆ. ಘಟನೆಯ ಬಗ್ಗೆ ವಿವರ ನೀಡಿದ್ದಾರೆ. ರಾಜೀನಾಮೆ ಕುರಿತು ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗ್ತಿದೆ. ಹೈಕಮಾಂಡ್ ಸೂಚನೆಯಿಂದಾಗಿ ಈಶ್ವರಪ್ಪ ಬೆಂಗಳೂರಿಗೆ ಆಗಮಿಸಿದ್ದು, ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ನಂತರ ರಾಜೀನಾಮೆ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ.