ರಾಜ್ಯದಲ್ಲಿರುವುದು ರಿಮೋಟ್ ಸರ್ಕಾರ; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಾಜ್ಯದಲ್ಲಿರುವುದು ರಿಮೋಟ್ ಸರ್ಕಾರ. ಅದು ಆರ್‌ಎಸ್‌ಎಸ್‌ನ್ನು ಮೆಚ್ಚಿಸುವುದಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಜಾಬ್, ಹಲಾಲ್ ಕಟ್, ಆಜಾನ್ ವಿವಾದವೆಬ್ಬಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಯಾರೋ ಟ್ರೋಲ್ ಮಾಡಿದ್ದಕ್ಕೆ ನಟ ಚೇತನ್‌ರನ್ನು ಎರಡು ದಿನ ಜೈಲಿಗೆ ಕಳುಹಿಸಲಾಗಿತ್ತು. ಈಗ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಸಾಕಷ್ಟು ಜನ ಮಾಡುತ್ತಿದ್ದಾರೆ. ಪೊಲೀಸರು ಈಗ ಎಲ್ಲಿ ಹೋಗಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಇಂದಿನ ಈ ಎಲ್ಲಾ ಬೆಳವಣಿಗೆಗಳಿಗೆ ಕಾಂಗ್ರೆಸ್ ಪಕ್ಷದ ಸ್ವಯಂಕೃತ ಅಪರಾಧವೇ ಕಾರಣ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಾಂಗ್ರೆಸ್ ಮೌನಕ್ಕೆ ಜಾರಿದೆ. ಮತಗಳು ದೂರವಾಗುತ್ತವೆ ಎಂಬ ಭಯ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಸುಮ್ಮನೆ ಕುಳಿತಿದ್ದಾರೆ ಎಂದು ಹೆಚ್ಡಿಕೆ ಆಕ್ರೋಶ ಹೊರಹಾಕಿದ್ದಾರೆ.