ಸಿಎಂ ಭೇಟಿಯಾದ ಶಿವರಾಜ್‌ಕುಮಾರ್ ದಂಪತಿ; ಕುತೂಹಲ ಕೆರಳಿಸಿದ ಭೇಟಿ
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ನಟ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದ ಶಿವಣ್ಣ ದಂಪತಿ ಕೆಲಹೊತ್ತು ಸಿಎಂ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದರು. ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಎತ್ತಂಗಡಿ ವಿವಾದದ ಸಂಬಂಧ ಶಿವರಾಜ್‌ಕುಮಾರ್ ದಂಪತಿ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಕಾಶ್ಮೀರಿ ಫೈಲ್ಸ್ ಚಿತ್ರ ಪ್ರದರ್ಶನಕ್ಕಾಗಿ ಚೆನ್ನಾಗಿ ಓಡುತ್ತಿರುವ ಜೇಮ್ಸ್ ಚಿತ್ರವನ್ನು ಎತ್ತಂಗಡಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಬಿಜೆಪಿ ಶಾಸಕರೇ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಕಿಶೋರ್ ಜೊತೆ ಸಿಎಂ ನಿವಾಸಕ್ಕೆ ಭೇಟಿ ನೀಡಿ ಈ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಮೈಸೂರಿನಲ್ಲಿರುವ ಶಕ್ತಿಧಾಮದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಂದಿದ್ದರು ಎಂದು ಹೇಳಿದ್ದಾರೆ.
ಮುಂದಿನ ತಿಂಗಳು ಶಕ್ತಿಧಾಮದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ. ಅದಕ್ಕಾಗಿ, ನನ್ನನ್ನು ಆಹ್ವಾನಿಸಲು ಬಂದಿದ್ದರು ಎಂದು ಸಿಎಂ ಹೇಳಿದರು. ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್ ಅವರು, ಕಾಶ್ಮೀರಿ ಫೈಲ್ಸ್ ವಿಚಾರವಾಗಿ ನಾವು ಮಾತನಾಡಲು ಬಂದಿರಲಿಲ್ಲ. ಆ ವಿಚಾರವನ್ನು ನಾವು ಮಾತನಾಡಲೇ ಇಲ್ಲ. ಶಕ್ರಿಧಾಮದ ಕಾರ್ಯಕ್ರಮಗಳ ವಿಚಾರವಾಗಿ ಮಾತನಾಡಲು ಬಂದಿದ್ದೆವು ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್, ಜೇಮ್ಸ್ ಸಿನಿಮಾ ನೋಡಲು ಮುಖ್ಯಮಂತ್ರಿಗಳನ್ನು ಕರೆಯಲು ನಾನು ಬಂದಿದ್ದೆ ಎಂದು ಹೇಳಿದ್ದಾರೆ.