ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಸಿಎಂ ಇಬ್ರಾಹಿಂ; ಸೋನಿಯಾಗೆ ಪತ್ರ
ಬೆಂಗಳೂರು: ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಅದರಲ್ಲಿಯೂ ಮುಸ್ಲಿಮರನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಎಂಎಲ್ಸಿ ಸಿ.ಎಂ. ಇಬ್ರಾಹಿಂ ಅಧಿಕೃತವಾಗಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಆದರೆ ಅಧಿಕಾರ ಕೊಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯಲು, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.
“1995ನೇ ಇಸವಿಯಲ್ಲಿ ಆಗಿದ್ದ ಬೆಳವಣಿಗೆಯೇ ಈಗಲೂ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ ಎನ್ನುವುದನ್ನು ನಾನು ಹಲವು ದಿನಗಳಿಂದ ಹೇಳುತ್ತಲೇ ಇದ್ದೇನೆ,” ಎಂದು ಎಚ್ಚರಿಕೆ ನೀಡಿದರು.”ಜನರ ಜೊತೆ ಸಂಪರ್ಕ ಇಲ್ಲದಿರುವವರನ್ನೇ ನಾಯಕರನ್ನಾಗಿ ಬೆಳೆಸುತ್ತಿದೆ. ಅದರ ಪರಿಣಾಮ ಏನು ಎಂಬುದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ತಿಳಿದಿದೆ. ಆದರೆ ಕರ್ನಾಟಕವನ್ನು ಉತ್ತರಪ್ರದೇಶ ಆಗಲು ನಾವು ಬಿಡುವುದಿಲ್ಲ. ಇದು ಬಸವಣ್ಣ, ಸರ್ವಜ್ಞ, ಕನಕದಾಸ, ಪುರಂದರದಾಸ, ರಾಘವೇಂದ್ರ ಸ್ವಾಮಿಗಳ ಪುಣ್ಯಸ್ಥಳ. ಹೀಗಾಗಿ ನಾನಿವತ್ತು ಕಾಂಗ್ರೆಸ್ ಪಕ್ಷ ತೊರೆದು, ನನ್ನ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ,” ಎಂದರು.