CrimeNational

ಕೊನಾರ್ಕ್‌ ಎಕ್ಸ್‌ಪ್ರಸ್‌ ರೈಲಿನಲ್ಲಿ ಬಂಗಾರ ಕಳ್ಳಸಾಗಾಣೆ-ರೈಲ್ವೆ ಪೊಲೀಸರಿಂದ ಆರೋಪಿ ವಶಕ್ಕೆ

ಮುಂಬೈ: ಮುಂಬೈ- ಭುವನೇಶ್ವರ್ ಕೋನಾರ್ಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೇ ದಾಖಲೆ ಪತ್ರಗಳಿಲ್ಲದ 32 ಕೆಜಿ ಚಿನ್ನಾಭರಣವನ್ನು ಜಿಆರ್‌ಪಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.  32ಕಿಲೋ ಚಿನ್ನದ ಬೆಲೆ ಬರೋಬ್ಬರಿ  16 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಆರ್‌ಪಿ ಪೊಲೀಸರು ಮಂಗಳವಾರ (ಮಾರ್ಚ್ 1,2022) ರಾತ್ರಿ 11:30 ಕ್ಕೆ ಮುಂಬೈ-ಭುವನೇಶ್ವರ ಕೊನಾರ್ಕ್ ಎಕ್ಸ್‌ಪ್ರೆಸ್‌ನಲ್ಲಿ ತಪಾಸಣೆ ನಡೆಸಿ ನಾಲ್ವರು ಪ್ರಯಾಣಿಕರಿಗೆ ಸೇರಿದ 32 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ತಕ್ಷಣವೇ ಪ್ರಯಾಣಿಕರನ್ನು ಬಂಧಿಸಿ ವಿಚಾರಣೆ ನಡೆಸಿದರು. ಆದರೆ ಅವರು ಪೊಲೀಸರಿಗೆ ಯಾವುದೇ ದಾಖಲೆ, GST ಬಿಲ್‌ಗಳನ್ನು ತೋರಿಸಲು ಸಾಧ್ಯವಾಗಿಲ್ಲ.

ಚಿನ್ನಾಭರಣ ಸಾಗಿಸುತ್ತಿದ್ದ ಶಂಕೆಯ ಮೇರೆಗೆ ನಾಲ್ವರು ಪ್ರಯಾಣಿಕರನ್ನು ಬಂಧಿಸಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನವನ್ನು ಪೊಲೀಸರು ಒಡಿಶಾ ಜಿಎಸ್‌ಟಿ ಜಾರಿ ನಿರ್ದೇಶನಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಿದ್ದಾರೆ. ನಾಲ್ವರು ಪ್ರಯಾಣಿಕರನ್ನು ಮುಂಬೈ ಮೂಲದ ಹೈಸ್ಮುಖಲಾಲ್ ಜೈನ್, ಸುರೇಶ್ ಸಹಿಂದೇವ್ ಖರೆ, ಮಹೇಶ್ ಭೋಮ್ಸರ್ ಮತ್ತು ದೀಪಕ್ ಪಟೇಲ್ ಎಂದು ಗುರುತಿಸಲಾಗಿದೆ. ನಾಲ್ಕು ಚೀಲಗಳು ಒಂದೊಂದು ಚೀಲದಲ್ಲಿ 8 ಕೆಜಿಯಷ್ಟು ಚಿನ್ನವಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Share Post