HIJAB: ಹಿಜಾಬ್ ವಿವಾದ ಬೆಳೆಸಿದ್ದೇ ಸರ್ಕಾರದ ದೊಡ್ಡ ತಪ್ಪು; ವಿಪಕ್ಷ ನಾಯಕ ಸಿದ್ದರಾಮಯ್ಯ
ಬೆಂಗಳೂರು: ಹಿಜಾಬ್ ವಿವಾದವನ್ನು ಬೆಳೆಸುವುದಕ್ಕೆ ಬಿಟ್ಟಿದ್ದು ರಾಜ್ಯ ಸರ್ಕಾರ. ಸಮಸ್ಯೆ ಬಗೆಹರಿಸದೇ ವಿವಾದ ಜಾಸ್ತಿಯಾಗುವಂತೆ ಮಾಡಿದ್ದು ಸರ್ಕಾರದ ತಪ್ಪು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ತಡೆಯಲಾಗುತ್ತಿದೆ. ಈ ಮೂಲಕ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳನ್ನು ಶಾಲೆಯಿಂದ ವಾಪಸ್ ಕಳುಹಿಸಲಾಗುತ್ತಿದೆ. ಇದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತ ನಿಯೋಗದ ಜೊತೆ ಡಿ.ಕೆ ಶಿವಕುಮಾರ್ ಅವರೊಂದಿಗೆ ಸಿಎಂ ಭೇಟಿ ಮಾಡಿ ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ಹೇಳಿದ್ದೇವೆ. ಮುಖ್ಯಮಂತ್ರಿಗಳು ಸಂಬಂಧಪಟ್ಟವರ ಜೊತೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಮತ್ತು ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತೇವೆ ಎಂದಿದ್ದಾರೆ. ಸರ್ಕಾರದ ನಿಲುವೇ ಗೊಂದಲಮಯವಾಗಿದೆ. ಇದರಿಂದ ಮುಸ್ಲಿಂ ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣ ಸಭೆ ಕರೆದು ಈ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.