ರಾಷ್ಟ್ರಧ್ವಜ ಇಳಿಸಿ, ಕೇಸರಿ ಧ್ವಜ ಹಾರಿಸುವ ಅಪಮಾನಕ್ಕಿಂತ ಬೇರೆ ಇದ್ಯಾ-ಡಿಕೆಶಿ
ಬೆಂಗಳೂರು: ಹಿಜಾಬ್ ವಿವಾದ ಉಗ್ರ ರೂಪ ಪಡೆದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(D.K.Shivakumar) ಪ್ರತಿಕ್ರಿಯೆ ನೀಡಿದ್ದಾರೆ. ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇವತ್ತು ಬಹಳ ದುಃಖದ ದಿನ. ಹೇಳಿಕೊಳ್ಳಲಾಗದಷ್ಟು ದುಃಖ ನನ್ನಲ್ಲಿ ಉಕ್ಕಿ ಬರುತ್ತಿದೆ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ನಮ್ಮ ಹಿರಿಯರು ಎಷ್ಟು ತ್ಯಾಗ ಬಲಿದಾನ ಮಾಡಿದ್ದಾರೆ ಎಂಬುದನ್ನು ನಾವು ನಮ್ಮ ಪಾಠಗಳಲ್ಲಿ ಓದಿ, ಕಲಿತಿದ್ದೇವೆ. ನಮ್ಮ ದೇಶದ ಐಕ್ಯತೆ ಸಮಗ್ರತೆಗೆ ನಮ್ಮ ಅನೇಕ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಸರ್ಕಾರ ರಚನೆಯಾದ ಮೇಲೆ ಸಂವಿಧಾನ(constitution) ನೀಡಿದ್ದು, ಅದು ಹಾಗೂ ನಮ್ಮ ರಾಷ್ಟ್ರ ಧ್ವಜ ನಮ್ಮ ಧರ್ಮ.
ಇಂದು ಒಂದು ಕಾಲೇಜಿನಲ್ಲಿ ನಮ್ಮ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತಿದ್ದಾರೆ ಎಂದರೆ ಈ ರಾಜ್ಯದಲ್ಲಿ ಏನಾಗುತ್ತಿದೆ, ದೇಶ ಎತ್ತ ಸಾಗುತ್ತಿದೆ ಎಂದು ವಿಶ್ವದೆಲ್ಲೆಡೆ ಇರುವ ಭಾರತೀಯರು, ಕನ್ನಡಿಗರು ಆಘಾತದಿಂದ ನೋಡುತ್ತಿದ್ದಾರೆ. ವಿಶ್ವದ ಪ್ರತಿಷ್ಠಿತ 500 ಕಂಪನಿಗಳಲ್ಲಿ ನಮ್ಮ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ. ವಿಶ್ವದ ಅನೇಕ ಕಡೆಗಳಲ್ಲಿ ಖ್ಯಾತ ವೈದ್ಯರು, ಇಂಜಿನಿಯರ್ ಗಳಾಗಿದ್ದಾರೆ. ನಮ್ಮಲ್ಲಿ ಉತ್ತಮ ಶಿಕ್ಷಣ ಪಡೆದ ಶೇ.11ರಷ್ಟು ವಿದ್ಯಾವಂತರನ್ನು ಹೊರದೇಶಗಳು ಕೆಲಸಕ್ಕೆ ತೆಗೆದುಕೊಂಡು ಅವರ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಕೆಳಗೆ ಇಳಿಯುತ್ತಿದೆ ಎಂದರೆ ಮನಸ್ಸಿಗೆ ಬಹಳ ನೋವಾಗುತ್ತಿದೆ.
ರಾಷ್ಟ್ರಧ್ವಜಕ್ಕೆ(national flag) ನಾವು ಎಷ್ಟೊಂದು ಗೌರವ ಕೊಡುತ್ತೇವೆ. ಆದರೆ ಈ ಸಂದರ್ಭದಲ್ಲಿ ರಾಷ್ಟ್ರಧ್ವಜ ಇಳಿಸುತ್ತಿದ್ದೇವೆ ಎಂದರೆ ಇದಕ್ಕಿಂತ ದೊಡ್ಡ ಅಪಮಾನ ಮತ್ತೊಂದಿಲ್ಲ. ನಮ್ಮ ರಾಷ್ಟ್ರ ಧ್ವಜದಲ್ಲೇ ಕೇಸರಿ ಇದೆ. ನಮಗೆ ಅದರ ಬಗ್ಗೆ ಗೌರವವಿದೆ. ಆದರೆ ಈಗ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ. ಇದು ದೇಶಕ್ಕೆ ಬಹು ದೊಡ್ಡ ಕಳಂಕ. ಇದಕ್ಕೆ ಯಾರು ಕಾರಣ ಎಂಬುದನ್ನು ಈಗ ಚರ್ಚೆ ಮಾಡುವುದಿಲ್ಲ. ಈಗಾಗಲೇ ಲಾಠಿಚಾರ್ಚ್ ಪರಿಸ್ಥಿತಿ ಎದುರಾಗುತ್ತಿದ್ದು, ಮುಂದೆ ಇದು ಯಾವ ಸ್ವರೂಪ ಪಡೆಯುತ್ತದೆಯೋ ಗೊತ್ತಿಲ್ಲ. ಇದರ ಬಗ್ಗೆ ಆತಂಕವಾಗುತ್ತಿದೆ.
ಮುಖ್ಯಮಂತ್ರಿಗಳು ಈ ಕೂಡಲೇ ತಮ್ಮ ಅಧಿಕಾರಿಗಳಿಗೆ ಹೇಳಿ ಎಲ್ಲ ಶಾಲಾ ಕಾಲೇಜುಗಳನ್ನು ಒಂದು ವಾರಗಳ ಕಾಲ ಮುಚ್ಚಿಸಿ, ಪರಿಸ್ಥಿತಿ ತಿಳಿಯಾಗುವವರೆಗೂ ಆನ್ಲೈನ್ ತರಗತಿಗಳನ್ನು ಮಾಡಿಸಬೇಕು. ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯಬೇಕು. ಸಮಾಜದಲ್ಲಿ ಶಾಂತಿ ಕಾಪಾಡಲು ಒಂದು ಕಠಿಣ ತೀರ್ಮಾನ ಕೈಗೊಳ್ಳಿ. ನಮ್ಮ ದೇಶವನ್ನು ಇಡೀ ವಿಶ್ವ ನೋಡುತ್ತಿದೆ. ಇಂತಹ ಗೊಂದಲ, ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡುತ್ತೇನೆ.
ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗೆ ಒಳಗಾಗಬಾರದು. ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.