Politics

ಟ್ವಿಟರ್‌ನಲ್ಲಿ ರಾಜ್ಯಪಾಲರನ್ನೇ ಬ್ಲಾಕ್‌ ಮಾಡಿದ ಸಿಎಂ ಮಮತ

ಕೋಲ್ಕತ್ತ  : ಪಶ್ಚಿಮ ಬಂಗಾಳದ ಸಿಎಂ ಮಮತ ಬ್ಯಾನರ್ಜಿ ಮತ್ತು ರಾಜ್ಯಪಾಲರ ನಡುವಿನ ಜಗಳ ತಾರಕಕ್ಕೇರಿದೆ. ರಾಜ್ಯಪಾಲರಾದ ಜಗದೀಪ್‌ ಧನಕರ್‌ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ಅವರು ಟ್ವಿಟರ್‌ನಲ್ಲಿ ಬ್ಲಾಕ್‌ ಮಾಡಿದ್ದಾರೆ.

ಈ ವಿಷಯದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಮಮತಾ ಬ್ಯಾನರ್ಜಿ, ” ಅವರು ದಿನನಿತ್ಯ ನಮ್ಮನ್ನು ಬೈಯುವುದೇ ಕಾಯಕ ಮಾಡಿಕೊಂಡಿದ್ದಾರೆ. ಹೀಗಾಗಿ ಅವರನ್ನು ಬ್ಲಾಕ್‌ ಮಾಡಿದ್ದೇನೆ” ಎಂದು ಮಮತಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಮಮತಾ ಅವರು, “ಜಗದೀಪ್‌ ಧನಕರ್‌ ನಮ್ಮನ್ನು, ನಮ್ಮ ಅಧಿಕಾರಿಗಳನ್ನು ಗುಲಾಮರ ರೀತಿ ನೋಡಲು ಬಯಸುತ್ತಿದ್ದಾರೆ. ಟ್ವಿಟರ್‌ನಲ್ಲಿ ದಿನನಿತ್ಯ ನಮಗೆ ತೀವ್ರ ಇರಿಸುಮುರಿಸು ಉಂಟುಮಾಡುತ್ತಿದ್ದರು. ಚುನಾವಣೆಯಲ್ಲಿ ಬಹುಮತ ಪಡೆದು ಸಂವಿಧಾನಬದ್ಧವಾಗಿ ರಚನೆಯಾದ ಸರ್ಕಾರಕ್ಕೆ ರಾಜ್ಯಪಾಲರು ಅಡ್ಡಿಯುಂಟು ಮಾಡುತ್ತಿದ್ದು ಇದು ನಾಚಿಕೆಗೇಡಿನ ವಿಷಯ” ಎಂದು ಹೇಳಿದ್ದಾರೆ.

ರಾಜ್ಯಪಾಲರ ಬಗ್ಗೆ ಪ್ರಧಾನಿಯವರಿಗೆ ನಾನು ಸಾಕಷ್ಟು ಬಾರಿ ದೂರು ನೀಡಿದ್ದರೂ ಕೂಡ ಏನು ಪ್ರಯೋಜನವಾಗಿಲ್ಲ. ರಾಜ್ಯಪಾಲರು ನಮ್ಮ ಯಾವುದೇ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ, ಹಠಮಾರಿ ಧೋರಣೆ ತೋರುತ್ತಿದ್ದಾರೆ. ಹೀಗಾದರೆ ರಾಜ್ಯಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ಕಾರ್ಯಗತಗೊಳಿಸುವುದು ಹೇಗೆ  ಎಂದು ಮಮತ ಪ್ರಶ್ನಿಸಿದ್ದಾರೆ.

Share Post