ಇಂಡಿಯಾ ಗೇಟ್ನಲ್ಲಿ ಅರಳಿದ ನೇತಾಜಿ ಹೊಲೊಗ್ರಾಮ್ ಪ್ರತಿಮೆ
ದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮ ದಿನದ ಅಂಗವಾಗಿ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರಧಾನಿ ನರೇಂದ್ರ ಮೋದಿಯವರು ಹೋಲೋಗ್ರಾಮ್ ಪ್ರತಿಮೆ ಉದ್ಘಾಟನೆ ಮಾಡಿದ್ದಾರೆ. ಅನಾವರಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ನೇತಾಜಿಯವರ ಜೀವನ ಮೌಲ್ಯಗಳನ್ನು ನೆನಪು ಮಾಡಿಕೊಂಡರು. “ಇದೊಂದು ಐತಿಹಾಸಿಕ ಸ್ಥಳ ಮತ್ತು ಐತಿಹಾಸಿಕ ಸಂದರ್ಭ. ನೇತಾಜಿ ಬ್ರಿಟಿಷರ ಮುಂದೆ ತಲೆಬಾಗಲು ನಿರಾಕರಿಸಿದರು. ಅವರ ಪ್ರತಿಮೆ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದರು. ʼಇದು ಕೇವಲ ಪ್ರತಿಮೆ ಮಾತ್ರವಲ್ಲ, ಭಾರತದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ನೀಡಿದ ನೇತಾಜಿಗೆ ಸಂದ ಗೌರವʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
#WATCH | Prime Minister Narendra Modi unveiled hologram statue of Netaji Subhas Chandra Bose at India Gate on his 125th birth anniversary #ParakramDiwas pic.twitter.com/vGQMSzLgfc
— ANI (@ANI) January 23, 2022
ಹೊಲೊಗ್ರಾಮ್ ಪ್ರತಿಮೆಯು 30,000 ಲ್ಯೂಮೆನ್ಸ್ 4K ಪ್ರೊಜೆಕ್ಟರ್ನಿಂದ ಚಾಲಿತವಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 3D ಚಿತ್ರವನ್ನು ಹೊಲೊಗ್ರಾಮ್ನಲ್ಲಿ ಕೇಂದ್ರೀಕರಿಸಲಾಗಿದೆ. ಹೊಲೊಗ್ರಾಮ್ ಪ್ರತಿಮೆ ಗಾತ್ರ 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು 2019, 2020, 2021 ಮತ್ತು 2022 ರ ಸುಭಾಸ್ ಚಂದ್ರ ಬೋಸ್ ಆಬ್ದಾ ಪ್ರಬಂಧನ್ ಪುರಸ್ಕಾರಗಳನ್ನು ಸಹ ಪ್ರದಾನ ಮಾಡಿದರು. ಸಮಾರಂಭದಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ನೀಡಲಾಗಿದೆ.
ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕೊಡುಗೆಯನ್ನು ಗುರುತಿಸಲು ಮತ್ತು ಗೌರವಿಸಲು ಕೇಂದ್ರವು ವಾರ್ಷಿಕವಾಗಿ ಸುಭಾಸ್ ಚಂದ್ರ ಬೋಸ್ ಆಬ್ದಾ ಪ್ರಬಂಧನ್ ಪುರಸ್ಕಾರವನ್ನು ಸ್ಥಾಪಿಸಿದೆ. ಈ ಪುರಸ್ಕಾರ ಪ್ರಶಸ್ತಿ ಸಂಸ್ಥೆಗೆ 51 ಲಕ್ಷ ರೂಪಾಯಿ ಮತ್ತು ಒಬ್ಬ ವ್ಯಕ್ತಿಯಾದರೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹೊಂದಿದೆ.