ಪಾಕ್ ಪರ ಘೋಷಣೆ ಕೂಗಿದ ಆರೋಪ ಪ್ರಕರಣ; ಜೋರಾಯ್ತು ಕಾಂಗ್ರೆಸ್-ಬಿಜೆಪಿ ಜಟಾಪಟಿ
ಬೆಂಗಳೂರು; ರಾಜ್ಯಸಭಾ ಚುನಾವಣೆ ದಿನ ಬೆಂಗಳೂರಿನ ವಿಧಾನಸೌಧದಲ್ಲಿ ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಕೂಗಿದ್ದಾರೆಂಬ ಆರೋಪ ಪ್ರಕರಣ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಅಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವಿಡಿಯೋನ ಅಸಲಿಯತ್ತು ಪರೀಕ್ಷಿಸಲು ಸರ್ಕಾರ ಎಫ್ಎಲ್ಎಲ್ ಗೆ ಕಳುಹಿಸಿತ್ತು. ಇದರ ವರದಿ ಇನ್ನೂ ಬಂದಿಲ್ಲ. ಹೀಗಿರುವಾಗಲೇ ಬಿಜೆಪಿ ಪಕ್ಷದ ನಾಯಕರು ಖಾಸಗಿ ಎಫ್ಎಸ್ಎಲ್ ಸಂಸ್ಥೆಯಿಂದ ಪರೀಕ್ಷೆ ಮಾಡಿಸಿ ಅದನ್ನು ಬಿಡುಗಡೆ ಮಾಡಿದ್ದಾರೆ. ಖಾಸಗಿ ಲ್ಯಾಬ್ ನೀಡಿದ ವರದಿಯಲ್ಲಿ ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಕೂಗಿರುವುದು ದೃಢವಾಗಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ವೇಳೆ ಅವರ ಬೆಂಬಲಿಗರು ವಿಧಾನಸೌಧಕ್ಕೆ ಆಗಮಿಸಿ ಅವರಿಗೆ ಅಭಿನಂದನೆ ಸಲ್ಲಿಸಿ ಘೋಷಣೆ ಕೂಗಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ರಾಜ್ಯ ಸರ್ಕಾರ ತನಿಖೆಗೆ ಆದೇಶ ಮಾಡಿದ್ದು, ವಿಡಿಯೋವನ್ನು ಎಫ್ಎಸ್ಎಲ್ಗೆ ಕಳುಹಿಸಿದೆ. ಆದ್ರೆ ಅದರ ವರದಿ ಬಂದಿದ್ದರೂ, ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದರ ಜತೆಗೆ ತಾವೇ ಖಾಸಗಿ ಲ್ಯಾಬ್ನಲ್ಲಿ ಮಾಡಿಸಿದ ಎಫ್ಎಸ್ಎಲ್ ವರದಿಯನ್ನು ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಅಧಿಕೃತ ಟ್ವಿಟಿರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಖಾಸಗಿ ಕ್ಲೂ4 ಎವಿಡೆನ್ಸ್ ಫಾರೆನ್ಸಿಕ್ ಸಂಸ್ಥೆಯ FSL ವರದಿಯನ್ನು ಟ್ವಟಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವರದಿ ಪ್ರಕಾರ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ದೃಢ. ವಿಡಿಯೋ ಅಸಲಿಯಾಗಿದೆ ಎಂದು ಹೇಳಲಾಗಿದೆ. ಈ ವರದಿಯನ್ನು FSL ತಜ್ಞ ಫಣೀಂದ್ರ ಎಂಬುವವರು ದೃಢ ಪಡಿಸಿದ್ದಾರೆ. ಕಾಂಗ್ರೆಸ್ನವರು ಸುಳ್ಳು ಸುದ್ದಿ ಸೃಷ್ಟಿಕರ್ತರು. ಹೀಗಾಗಿ ಕಾಂಗ್ರೆಸ್ ನಾಯಕರು ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಬಿಜೆಪಿ ಆಗ್ರಹ ಮಾಡಿದೆ.
ಇನ್ನು ಬಿಜೆಪಿ ನಿಯೋಗ ಇಂದು ಡಿಜಿ&ಐಜಿಪಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದೆ. ಘಟನೆ ನಡೆದು 8 ದಿನ ಕಳೆದರೂ ಎಫ್ಎಸ್ಎಲ್ ವರದಿಯನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಆದಷ್ಟು ಬೇಗ ಅಧಿಕೃತ ಎಫ್ಎಸ್ಎಲ್ ವರದಿಯನ್ನು ಬಿಡುಗಡೆ ಮಾಡುವಂತೆ ಡಿಜಿ-ಐಜಿಪಿಯನ್ನು ಆಗ್ರಹಿಸಲಾಗಿದೆ.